ಹುಬ್ಬಳ್ಳಿ: ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದ ಬಿಸಿ ಕೇವಲ ಸಾಮಾನ್ಯ ಪ್ರಯಾಣಿಕರಿಗಷ್ಟೇ ಅಲ್ಲ, ಮದುವೆ ಸಂಭ್ರಮದಲ್ಲಿರುವವರಿಗೂ ತಟ್ಟಿದೆ. ವಿಮಾನ ರದ್ದತಿಯಿಂದಾಗಿ ನವಜೋಡಿಯೊಂದು ತಮ್ಮದೇ ಆರತಕ್ಷತೆ ಕಾರ್ಯಕ್ರಮಕ್ಕೆ ಬರಲಾಗದೆ, ಆನ್‌ಲೈನ್ ಮೂಲಕವೇ ಭಾಗವಹಿಸಿದ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ್ ಮತ್ತು ಒಡಿಶಾದ ಭುವನೇಶ್ವರ ಮೂಲದ ಸಂಗಮ್ ದಾಸ್ ಅವರ ವಿವಾಹ ನವೆಂಬರ್ 23ರಂದು ಭುವನೇಶ್ವರದಲ್ಲಿ ನೆರವೇರಿತ್ತು. ಡಿಸೆಂಬರ್ 3ರಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ನವಜೋಡಿ ಡಿಸೆಂಬರ್ 2ರಂದು ಭುವನೇಶ್ವರದಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೆ ಬರಲು ಇಂಡಿಗೋ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ಆದರೆ, ಡಿಸೆಂಬರ್ 2ರಂದು ಪ್ರಾರಂಭವಾದ ವಿಮಾನ ವಿಳಂಬ ಡಿಸೆಂಬರ್ 3ರ ಮುಂಜಾನೆಯವರೆಗೂ ಮುಂದುವರಿಯಿತು. ಕೊನೆಗೆ ವಿಮಾನ ರದ್ದಾಗಿದ್ದರಿಂದ ನವಜೋಡಿ ಭುವನೇಶ್ವರದಲ್ಲೇ ಸಿಲುಕಿಕೊಳ್ಳುವಂತಾಯಿತು. ಅತ್ತ ಹುಬ್ಬಳ್ಳಿಯಲ್ಲಿ ಅತಿಥಿಗಳು ಆಗಮಿಸಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲು ಸಾಧ್ಯವಾಗದೆ, ವಧುವಿನ ಪೋಷಕರು ವಿಭಿನ್ನ ನಿರ್ಧಾರ ಕೈಗೊಂಡರು.
ವೇದಿಕೆಯಲ್ಲಿ ನವಜೋಡಿ ಕೂರುವ ಆಸನದಲ್ಲಿ ವಧುವಿನ ಪೋಷಕರೇ ಕುಳಿತುಕೊಂಡು ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಿದರು. ಇದೇ ವೇಳೆ ವೇದಿಕೆಯ ಮೇಲೆ ದೊಡ್ಡ ಪರದೆಯನ್ನು ಅಳವಡಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ನವಜೋಡಿ ಅತಿಥಿಗಳನ್ನು ಮಾತನಾಡಿಸಿ, ಶುಭ ಹಾರೈಕೆಗಳನ್ನು ಸ್ವೀಕರಿಸಿದರು. ವಿಮಾನಯಾನ ಸಂಸ್ಥೆಯ ಅವ್ಯವಸ್ಥೆಯಿಂದಾಗಿ ಖುದ್ದು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದರೂ, ತಂತ್ರಜ್ಞಾನದ ಮೂಲಕ ನವಜೋಡಿ ತಮ್ಮ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ದೇಶದಲ್ಲಿ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ | 550ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್ ; ಪ್ರಯಾಣಿಕರ ಆಕ್ರೋಶ



















