ಮುಂಬೈ: ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರೀತಿಯಲ್ಲಿದ್ದ ಕಿರುತೆರೆಯ ಜನಪ್ರಿಯ ಜೋಡಿ, ಸಂದೀಪ್ ಬಸ್ವಾನಾ ಮತ್ತು ಅಶ್ಲೇಷಾ ಸಾವಂತ್ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 23 ವರ್ಷಗಳ ಸುದೀರ್ಘ ಸಂಬಂಧದ ನಂತರ ಈ ಜೋಡಿ ವೃಂದಾವನದ ಚಂದ್ರೋದಯ ದೇವಸ್ಥಾನದಲ್ಲಿ ಸರಳ ಸಮಾರಂಭದಲ್ಲಿ ಹಸೆಮಣೆ ಏರಿದ್ದಾರೆ.
‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಸೆಟ್‌ನಲ್ಲಿ ಚಿಗುರಿದ್ದ ಪ್ರೀತಿ
ಏಕ್ತಾ ಕಪೂರ್ ಅವರ ಪ್ರಸಿದ್ಧ ಧಾರಾವಾಹಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯ ಸೆಟ್‌ನಲ್ಲಿ 2002ರಲ್ಲಿ ಸಂದೀಪ್ ಮತ್ತು ಅಶ್ಲೇಷಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಧಾರಾವಾಹಿಯಲ್ಲಿ ಸಹ-ನಟರಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರ ನಡುವೆ ಸ್ನೇಹ ಬೆಳೆದು, ನಂತರ ಅದು ಪ್ರೀತಿಗೆ ತಿರುಗಿತ್ತು. ಅಂದಿನಿಂದ ಸುಮಾರು 23 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ತಮ್ಮ ಮದುವೆಯ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಜೋಡಿ, “ಈಗ ನಾವು ಮಿಸ್ಟರ್ & ಮಿಸೆಸ್ ಆಗಿ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಸಂಪ್ರದಾಯ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಚಿತ್ರಗಳಲ್ಲಿ ಇಬ್ಬರೂ ಗುಲಾಬಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ವೃಂದಾವನದಲ್ಲೇ ಮದುವೆ ಏಕೆ?
“ನಾನು ಮತ್ತು ಅಶ್ಲೇಷಾ ಏಪ್ರಿಲ್‌ನಲ್ಲಿ ವೃಂದಾವನಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ರಾಧಾ-ಕೃಷ್ಣ ದೇವಾಲಯಗಳೊಂದಿಗೆ ನಮಗೆ ವಿಶೇಷ ಅನುಬಂಧವಿದೆ. ಆ ಭೇಟಿಯೇ ನಮ್ಮನ್ನು 23 ವರ್ಷಗಳ ನಂತರ ಮದುವೆಯಾಗಲು ಪ್ರೇರೇಪಿಸಿತು. ನಮ್ಮ ಪೋಷಕರು ಬಹಳ ಸಂತೋಷಗೊಂಡಿದ್ದಾರೆ. ಅವರು ಈ ದಿನಕ್ಕಾಗಿ ಬಹುಕಾಲದಿಂದ ಕಾಯುತ್ತಿದ್ದರು,” ಎಂದು ಹೇಳಿದ್ದಾರೆ.
ಅಶ್ಲೇಷಾ ಕೂಡ ಸಂತಸ ಹಂಚಿಕೊಂಡು, “ನನ್ನ ಜೀವನದ ಪ್ರೀತಿಗೆ ಪಾತ್ರನಾದ ವ್ಯಕ್ತಿಯೊಂದಿಗೆ ಮದುವೆಯಾಗುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಿದೆ. ವೃಂದಾವನ ನಮಗೆ ಸೂಕ್ತ ಸ್ಥಳ ಎನಿಸಿತು. ಇದು ಹಠಾತ್ ನಿರ್ಧಾರವಾಗಿತ್ತು ಮತ್ತು ನಮ್ಮ ಕುಟುಂಬದವರೊಂದಿಗೆ ಖಾಸಗಿಯಾಗಿ ನಡೆಸಲು ನಾವು ಬಯಸಿದ್ದೆವು,” ಎಂದಿದ್ದಾರೆ. “ಇಷ್ಟು ವರ್ಷಗಳಿಂದ ನೀವೇಕೆ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸಿ ನಮಗೆ ಸಾಕಾಗಿತ್ತು. ನನ್ನ ಮನಸ್ಸಿನಲ್ಲಿ ನಾವಿಬ್ಬರೂ ಯಾವಾಗಲೂ ಗಂಡ-ಹೆಂಡತಿಯೇ ಆಗಿದ್ದೆವು,” ಎಂದು ಸಂದೀಪ್ ತಮಾಷೆಯಾಗಿ ಹೇಳಿದ್ದಾರೆ.
ಸ್ಮೃತಿ ಇರಾನಿ ಶುಭಾಶಯ
‘ಕ್ಯೂಂಕಿ…’ ಧಾರಾವಾಹಿಯಲ್ಲಿ ತುಳಸಿ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ್ದ, ಹಾಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಈ ಜೋಡಿಗೆ ಶುಭ ಹಾರೈಸಿದ್ದಾರೆ. “ಕೆಲವು ಪ್ರೇಮಕಥೆಗಳು ವಿಭಿನ್ನ ತಿರುವುಗಳನ್ನು ಪಡೆಯುತ್ತವೆ. ಅವು ಸಂಪ್ರದಾಯದಿಂದಲ್ಲ, ವಾಸ್ತವದಿಂದ ಆರಂಭವಾಗುತ್ತವೆ. ಪ್ರೀತಿ ಕಾಲಕ್ರಮೇಣ ಕಡಿಮೆಯಾಗಬಹುದು, ಆದರೆ ಸ್ನೇಹ ಶಾಶ್ವತ ಎಂಬ ಸತ್ಯದಿಂದ ಇಂತಹ ಸಂಬಂಧಗಳು ಬೆಳೆಯುತ್ತವೆ,” ಎಂದು ಅವರು ಬರೆದಿದ್ದಾರೆ. “ಕೊನೆಗೂ ನನ್ನಂತಹ ಕಿರಿಕಿರಿ ಮಾಡುವ ಸ್ನೇಹಿತರ ಆಸೆ ಈಡೇರಿದೆ,” ಎಂದು ಸ್ಮೃತಿ ಇರಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಮತ್ತೊಂದು ಆಘಾತ : ತಂದೆಯ ಬೆನ್ನಲ್ಲೇ ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್ ಆಸ್ಪತ್ರೆಗೆ ದಾಖಲು!



















