ಹಾವೇರಿ: ಪತ್ನಿ, ಅತ್ತೆ-ಮಾವನ ಕಿರುಕುಳಕ್ಕೆ ಮನನೊಂದು ಕುರಿಗಾಹಿಯೊಬ್ಬ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ವರಹ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಚಿಲ್ಲೋಜಿ (26) ಆತ್ಮಹತ್ಯೆಗೆ ಒಳಗಾದ ಕುರಿಗಾಯಿ. ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾ. ಅಂಕಲಿ ಗ್ರಾಮದ ಮಂಜುನಾಥ್, ಸಂಚಾರಿ ಕುರಿಗಾಹಿಯಾಗಿ ಹೀರೆಕೆರೂರಿನಲ್ಲಿ ನೆಲೆಸಿದ್ದ. ಒಂದು ವರ್ಷದ ಹಿಂದಷ್ಟೇ ಸಹೋದರ ಅತ್ತೆ ಮಗಳಾದ ರೇಖಾಳನ್ನು ಮದುವೆಯಾಗಿದ್ದನು.
ಆದರೆ, ಮದುವೆಯಾಗಿನಿಂದಲೂ ಪತ್ನಿ ರೇಖಾ, ಮಂಜುನಾಥ್ ಜೊತೆ ಜಗಳ ಮಾಡುತ್ತಿದ್ದಳು. ಜಗಳದ ಬಳಿಕ ಆಗಾಗ ತವರು ಮನೆಗೆ ಹೋಗುತ್ತಿದ್ದಳು. ಇದರಿಂದಾಗಿ ಕುರಿಗಾಹಿ ಮಂಜುನಾಥ ಮನನೊಂದಿದ್ದ ಎನ್ನಲಾಗುತ್ತಿದೆ.
ಆತ್ಮಹತ್ಯೆಗೂ ಮುನ್ನ ಮಂಜುನಾಥ್, ಪತ್ನಿ ರೇಖಾ, ಮಾವ ಭೀರಪ್ಪ ಕವಲಾಪುರಿ, ಅತ್ತೆ ಸತ್ಯವ್ವ, ಹೊನ್ನಸಿದ್ದಪ್ಪ ಹಾಗೂ ರಾಜಪ್ಪ ಎಂಬುವರು ಮಾನಸಿಕವಾಗಿ ತುಂಬಾ ಹಿಂಸೆ ಕೊಟ್ಟಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಡಿಯೋ ಮಾಡಿ ಕಣ್ಣೀರು ಹಾಕಿ. ಕಿರಿಯ ಸಹೋದರನಿಗೆ ವಿಡಿಯೋ ಕಳಿಸಿ ಬಳಿಕ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಈ ಘಟನಾ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಐದು ಜನರನ್ನು ಹೀರೆಕೆರೂರು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ | ಜೆಡಿಎಸ್ ಮುಖಂಡನ ಕೊಲೆ ಯತ್ನ ಪ್ರಕರಣ ; ಕಾಂಗ್ರೆಸ್ ನಾಯಕಿ ಸವಿತಾಬಾಯಿ ಬಂಧನ



















