ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಕಳೆದ ಗುರುವಾರ ನಡೆದ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.
ಗುರುವಾರ ಮಂಟೂರು ರಸ್ತೆಯ ಬ್ಯಾಳಿ ಪ್ಲಾಟ್ ಬಳಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಲ್ಲಿಕ್ ಜಾನ್ ಅಹ್ಮದ್ (25) ಎಂಬ ಯುವಕನನ್ನು ಸೆಟ್ಲ್‌ಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳಲ್ಲಿ ಮುಖ್ಯ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಮತ್ತು ಮಹಮ್ಮದ್ ಶೇಖ್ ಎಂಬ ಇಬ್ಬರನ್ನು ಉಳಿದ ಆರೋಪಿಗಳನ್ನು ತೋರಿಸಲು ಘಟನಾ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ, ಪೊಲೀಸರ ಮೇಲೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬೆಂಡಿಗೇರಿ ಠಾಣಾ ಇನ್ಸ್‌ಪೆಕ್ಟರ್ ಎಸ್.ಆರ್.ನಾಯ್ಕ ಮತ್ತು ಅವರ ತಂಡ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದೆ. ಗುಂಡೇಟಿನಿಂದ ಆರೋಪಿಗಳು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆರೋಪಿಗಳ ಕಲ್ಲು ತೂರಾಟದಿಂದ ಪೊಲೀಸರಿಗೂ ಗಾಯಗಳಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಕೆಎಂಸಿಆರ್ಐನಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, “ಕಳೆದ ಮೂರು ದಿನಗಳ ಹಿಂದೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ ಮಲ್ಲಿಕಜಾನ್ ಎಂಬಾತನನ್ನು ಸೆಟ್ಲ್‌ಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದರು. ನಂತರ ಉಳಿದ ಆರೋಪಿಗಳನ್ನು ತೋರಿಸಲು ಕರೆದೊಯ್ದಾಗ, ಆರೋಪಿಗಳು ಪೊಲೀಸರ ಮೇಲೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್.ನಾಯ್ಕ ಮತ್ತು ಅವರ ತಂಡ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಮುಖ್ಯ ಆರೋಪಿಗಳಾದ ಬಾಲರಾಜ ಅಲಿಯಾಸ್ ಬಂಗಾರ ಬಾಲ್ಯಾ, ಮಹಮ್ಮದ್ ಶೇಖ್ ಎಂಬವರ ಬಲಗಾಲಿಗೆ ಗುಂಡು ಬಿದ್ದಿದೆ. ಘಟನೆಯಲ್ಲಿ ಮೂವರು ಪೊಲೀಸರಿಗೂ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತರು ಕೆಎಂಸಿಆರ್ಐಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್ ಜೊತೆಗಿದ್ದರು.
ಇದನ್ನೂ ಓದಿ: ಧಾರವಾಡ | ಒಂದೇ ದಿನ ಇಬ್ಬರು ಪೊಲೀಸರು ಸಾವು ; ಮುಗಿಲು ಮುಟ್ಟಿದ ಆಕ್ರಂದನ



















