ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಸಮೀಪದ ನೌಗಾಮ್ ಪೊಲೀಸ್ ಠಾಣೆಯಲ್ಲಿ 9 ಮಂದಿಯ ಸಾವಿಗೆ ಕಾರಣವಾದ ಸ್ಫೋಟಕವು ದಿಲ್ಲಿ ಸ್ಫೋಟದ ರೂವಾರಿಗಳಾದ ಫರೀದಾಬಾದ್ ವೈದ್ಯರಿಂದ ವಶಪಡಿಸಿಕೊಂಡಿದ್ದು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ನಿನ್ನೆ(ಶುಕ್ರವಾರ) ಪೊಲೀಸ್ ಠಾಣೆಯಲ್ಲೇ ಈ ಸ್ಫೋಟಕಗಳು ಆಕಸ್ಮಿಕವಾಗಿ ಸ್ಫೋಟಗೊಂಡು ಒಂಬತ್ತು ಮಂದಿ ಮೃತಪಟ್ಟು, 32ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳಾಗಿದ್ದಾರೆ.
ಸ್ಫೋಟದ ತೀವ್ರತೆಗೆ ಅಧಿಕಾರಿಗಳೇ ಬಲಿ
ಹರ್ಯಾಣದ ಫರಿದಾಬಾದ್‌ನಲ್ಲಿ ಇತ್ತೀಚೆಗೆ ವೈದ್ಯರೊಬ್ಬರಿಂದ ವಶಪಡಿಸಿಕೊಳ್ಳಲಾಗಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ತನಿಖೆಗಾಗಿ ಇರಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ತಂಡದ ಅಧಿಕಾರಿಗಳು ಸ್ಫೋಟಕಗಳನ್ನು ಪರಿಶೀಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಮೃತಪಟ್ಟವರಲ್ಲಿ ರಾಜ್ಯ ತನಿಖಾ ಸಂಸ್ಥೆ (SIA)ಯ ಒಬ್ಬ ಅಧಿಕಾರಿ, ವಿಧಿವಿಜ್ಞಾನ ಪ್ರಯೋಗಾಲಯದ ಮೂವರು ಅಧಿಕಾರಿಗಳು, ಕ್ರೈಂ ವಿಭಾಗದ ಇಬ್ಬರು ಅಧಿಕಾರಿಗಳು, ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ಓರ್ವ ದರ್ಜಿ ಸೇರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ನಳಿನ್ ಪ್ರಭಾತ್ ತಿಳಿಸಿದ್ದಾರೆ. ಗಾಯಾಳುಗಳನ್ನು ಭಾರತೀಯ ಸೇನೆಯ 92 ಬೇಸ್ ಆಸ್ಪತ್ರೆ ಮತ್ತು ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (SKIMS) ದಾಖಲಿಸಲಾಗಿದೆ. ದಿಲ್ಲಿಯಲ್ಲಿ ಕಾರು ಬಾಂಬ್ ಸ್ಫೋಟಿಸಿದ್ದಾನೆ ಎನ್ನಲಾದ ಡಾಕ್ಟರ್ ಉಮರ್ ನಬಿಯ ಪುಲ್ವಾಮಾದಲ್ಲಿರುವ ಮನೆಯನ್ನು ಭದ್ರತಾ ತಂಡ ಧ್ವಂಸಗೊಳಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
‘ವೈಟ್ ಕಾಲರ್’ ಉಗ್ರರ ಜಾಲದ ಬೆನ್ನು ಹತ್ತಿದ್ದ ಪೊಲೀಸರು
ನೌಗಾಮ್ ಪ್ರದೇಶದ ಹಲವೆಡೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪೋಸ್ಟರ್‌ಗಳನ್ನು ಅಂಟಿಸಿದ್ದ ಪ್ರಕರಣವನ್ನು ಇದೇ ನೌಗಾಮ್ ಠಾಣೆಯ ಪೊಲೀಸರು ಭೇದಿಸಿದ್ದರು. ಈ ತನಿಖೆಯು ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿರುವ ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಉನ್ನತ ವಿದ್ಯಾವಂತ ವೃತ್ತಿಪರರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ‘ವೈಟ್ ಕಾಲರ್’ ಉಗ್ರರ ಜಾಲವನ್ನು ಬಯಲಿಗೆಳೆದಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಡಾ. ಆದೀಲ್ ಅಹ್ಮದ್ ರಾಥರ್ ಎಂಬಾತ ಪೋಸ್ಟರ್ ಅಂಟಿಸುತ್ತಿರುವುದು ಪತ್ತೆಯಾಗಿತ್ತು. ಅಕ್ಟೋಬರ್ 27ರಂದು ಆತನನ್ನು ಬಂಧಿಸಿದಾಗ, ಈ ಜಾಲದ ಮತ್ತಷ್ಟು ಕೊಂಡಿಗಳು ಪತ್ತೆಯಾಗಿದ್ದವು.
ದೆಹಲಿ ಸ್ಫೋಟಕ್ಕೂ ಇದೆ ನಂಟು
ಡಾ. ರಾಥರ್‌ನ ವಿಚಾರಣೆ ವೇಳೆ ಫರಿದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವೈದ್ಯ ಡಾ. ಮುಜಮ್ಮಿಲ್ ಶಕೀಲ್‌ನ ಹೆಸರು ಬಹಿರಂಗವಾಗಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ಪೊಲೀಸರ ಜಂಟಿ ತಂಡವು ಶಕೀಲ್‌ಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ನಡೆಸಿದಾಗ ಸುಮಾರು 3,000 ಕೆ.ಜಿ. ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಡಾ. ಶಾಹೀನ್ ಸಯೀದ್ ಎಂಬ ವೈದ್ಯೆಯನ್ನೂ ಬಂಧಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ, ದೆಹಲಿಯ ಕೆಂಪು ಕೋಟೆ ಬಳಿ ಕಾರೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 13 ಜನರು ಮೃತಪಟ್ಟಿದ್ದರು. ಈ ಸ್ಫೋಟದ ಹಿಂದೆ ಇದೇ ಜಾಲದ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. ಸ್ಫೋಟಕಗಳನ್ನು ಸಾಗಿಸಲು ಬಳಸಿದ್ದ ಕಾರನ್ನು ಡಾ. ಉಮರ್ ನಬಿ ಎಂಬಾತ ಚಲಾಯಿಸುತ್ತಿದ್ದ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರೀ ಸ್ಫೋಟ | ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವು


















