ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ಭಾರತೀಯರಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಚ್ 1ಬಿ (H-1B) ವೀಸಾ ನೀತಿಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದೆ. ವಿದೇಶಿ ಕೌಶಲ್ಯಯುತ ಉದ್ಯೋಗಿಗಳ ಮೇಲೆ ದೀರ್ಘಕಾಲ ಅವಲಂಬಿತರಾಗುವ ಬದಲು, ಅವರನ್ನು ತಾತ್ಕಾಲಿಕವಾಗಿ ಅಮೆರಿಕಕ್ಕೆ ಕರೆತಂದು, ಅಮೆರಿಕನ್ನರಿಗೆ ಉನ್ನತ ಕೌಶಲ್ಯದ ತರಬೇತಿ ನೀಡಿ, ನಂತರ ಅವರನ್ನು ತಮ್ಮ ದೇಶಗಳಿಗೆ ವಾಪಸ್ ಕಳುಹಿಸುವುದು ಈ ಹೊಸ ನೀತಿಯ ಉದ್ದೇಶವಾಗಿದೆ ಎಂದು ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಸ್ಪಷ್ಟಪಡಿಸಿದ್ದಾರೆ.
ಜ್ಞಾನ ವರ್ಗಾವಣೆಯೇ ಮುಖ್ಯ ಗುರಿ
ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಬೆಸೆಂಟ್, ಈ ಹೊಸ ನೀತಿಯನ್ನು “ಜ್ಞಾನ ವರ್ಗಾವಣೆ” (knowledge transfer) ಪ್ರಯತ್ನ ಎಂದು ಬಣ್ಣಿಸಿದ್ದಾರೆ. ದಶಕಗಳಿಂದ ಹೊರಗುತ್ತಿಗೆಯಿಂದಾಗಿ ದುರ್ಬಲಗೊಂಡಿರುವ ಅಮೆರಿಕದ ಉತ್ಪಾದನಾ ವಲಯವನ್ನು ಪುನರ್‌ನಿರ್ಮಿಸುವುದು ಇದರ ಹಿಂದಿನ ಪ್ರಮುಖ ಆಶಯವಾಗಿದೆ.
“ನಾವು ಸೆಮಿಕಂಡಕ್ಟರ್ ಮತ್ತು ಹಡಗು ನಿರ್ಮಾಣದಂತಹ ಉದ್ಯಮಗಳನ್ನು ಅಮೆರಿಕಕ್ಕೆ ಮರಳಿ ತರಲು ಬಯಸಿದ್ದೇವೆ. ಆದರೆ, ಸದ್ಯಕ್ಕೆ ಈ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಅಮೆರಿಕನ್ ಉದ್ಯೋಗಿಗಳು ಲಭ್ಯವಿಲ್ಲ. ಹೀಗಾಗಿ, ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ಮೂರು, ಐದು ಅಥವಾ ಏಳು ವರ್ಷಗಳ ಅವಧಿಗೆ ಅಮೆರಿಕಕ್ಕೆ ಕರೆತಂದು, ಇಲ್ಲಿನ ಉದ್ಯೋಗಿಗಳಿಗೆ ತರಬೇತಿ ನೀಡಲಾಗುವುದು. ತರಬೇತಿ ಮುಗಿದ ನಂತರ, ವಿದೇಶಿ ಉದ್ಯೋಗಿಗಳು ತಮ್ಮ ದೇಶಗಳಿಗೆ ಹಿಂತಿರುಗುತ್ತಾರೆ ಮತ್ತು ಅಮೆರಿಕನ್ ಉದ್ಯೋಗಿಗಳು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ,” ಎಂದು ಅವರು ವಿವರಿಸಿದರು.
ಟ್ರಂಪ್ ಅವರ ಬೃಹತ್ ಆರ್ಥಿಕ ನೀತಿಯ ಭಾಗ
ವಿದೇಶಿ ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು ಬರುತ್ತದೆ ಎಂಬ ಆತಂಕವನ್ನು ತಳ್ಳಿಹಾಕಿದ ಬೆಸೆಂಟ್, “ಸದ್ಯಕ್ಕೆ ಆ ಉದ್ಯೋಗವನ್ನು ಮಾಡಲು ಅಮೆರಿಕನ್ನರಿಗೆ ಸಾಧ್ಯವಿಲ್ಲ, ಆದರೆ ಭವಿಷ್ಯದಲ್ಲಿ ಸಾಧ್ಯವಾಗಲಿದೆ,” ಎಂದು ಹೇಳಿದ್ದಾರೆ. ಈ ವೀಸಾ ನೀತಿಯು, ಪ್ರಮುಖ ಉದ್ಯಮಗಳನ್ನು ಅಮೆರಿಕಕ್ಕೆ ಮರಳಿ ತರುವ ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಟ್ರಂಪ್ ಅವರ ಬೃಹತ್ ಆರ್ಥಿಕ ಯೋಜನೆಯ ಭಾಗವಾಗಿದೆ. ಇದೇ ವೇಳೆ, 100,000 ಡಾಲರ್‌ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ 2,000 ಡಾಲರ್ ಸುಂಕದ ರಿಯಾಯಿತಿ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 32 ಕಾರುಗಳು, 32 ದಾಳಿ : ದಿಲ್ಲಿಯಲ್ಲಿ ರಕ್ತಪಾತಕ್ಕೆ ಉಗ್ರರು ನಡೆಸಿದ್ದ ಭಯಾನಕ ಪ್ಲ್ಯಾನ್ ಬಯಲು!



















