ಬೆಂಗಳೂರು: ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನ.13ರಿಂದ 16ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳ ನಡೆಯಲಿದೆ. ನ.16ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳವನ್ನು “ಸಮೃದ್ಧ ಕೃಷಿ – ವಿಕಸಿತ ಭಾರತ” (ನೆಲ, ಜಲ ಮತ್ತು ಬೆಳೆ)” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ.
ಇಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಈ ವೇಳೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ, ಶಾಸಕ ಶರತ್ ಬಚ್ಚೇಗೌಡ ಅವರು ಉಪಸ್ಥಿತರಿರುತ್ತಾರೆ.
ಈ ಮೇಳವು ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನ ಮುಂತಾದವುಗಳು ಅಡಕವಾಗಿವೆ. ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡಲು ಉತ್ತಮ ವೇದಿಕೆಯಾನ್ನು ಒದಗಿಸುತ್ತಿದೆ.
ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕೃಷಿಕರ ಅನುಕೂಲಕ್ಕಾಗಿ ಜಿಕೆವಿಕೆ ಮುಖ್ಯ ದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ಮತ್ತು ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಕೇಸ್ | SIT ವಿಚಾರಣೆ ಬಳಿಕ ನಟ ಪ್ರಕಾಶ್ ರಾಜ್ ಕ್ಷಮೆಯಾಚನೆ!


















