ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಬೆನ್ನಲ್ಲೇ, ವಿಜಯದ ರೂವಾರಿಗಳಿಗೆ ಬಹುಮಾನಗಳ ಸುರಿಮಳೆಯಾಗುತ್ತಿದೆ. ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವೇಗದ ಬೌಲರ್‌ಗಳಾದ ರೇಣುಕಾ ಸಿಂಗ್ ಠಾಕೂರ್ ಮತ್ತು ಕ್ರಾಂತಿ ಗೌಡ್ ಅವರ ಅಮೋಘ ಪ್ರದರ್ಶನವನ್ನು ಗುರುತಿಸಿ, ಅವರ ತವರು ರಾಜ್ಯ ಸರ್ಕಾರಗಳು ತಲಾ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿವೆ.
ಹಿಮಾಚಲದ ಮಗಳಿಗೆ ಸಿಎಂ ಕರೆ: 1 ಕೋಟಿ ಬಹುಮಾನ, ಸರ್ಕಾರಿ ಉದ್ಯೋಗದ ಭರವಸೆ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು, ಶಿಮ್ಲಾ ಜಿಲ್ಲೆಯ ರೋಹ್ರು ಮೂಲದವರಾದ ರೇಣುಕಾ ಸಿಂಗ್ ಠಾಕೂರ್ ಅವರಿಗೆ 1 ಕೋಟಿ ರೂಪಾಯಿ ನಗದು ಪುರಸ್ಕಾರವನ್ನು ಸೋಮವಾರ ಪ್ರಕಟಿಸಿದ್ದಾರೆ. “ನೀನು ಅದ್ಭುತವಾಗಿ ಆಡಿ, ಹಿಮಾಚಲಕ್ಕೆ ಹೆಮ್ಮೆ ತಂದಿದ್ದೀಯಾ” ಎಂದು ರೇಣುಕಾ ಅವರಿಗೆ ಖುದ್ದು ಕರೆ ಮಾಡಿ ಅಭಿನಂದಿಸಿದ ಸಿಎಂ ಸುಖು, ಅವರ ಸಾಧನೆಯನ್ನು ಗುರುತಿಸಿ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಟೂರ್ನಿಯುದ್ದಕ್ಕೂ, ರೇಣುಕಾ ಸಿಂಗ್ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ಎದುರಾಳಿಗಳ ಮೇಲೆ ನಿರಂತರ ಒತ್ತಡ ಹೇರಿದ್ದರು. ಅವರು ಕೇವಲ 3 ವಿಕೆಟ್ ಪಡೆದರೂ, ಪವರ್‌ಪ್ಲೇನಲ್ಲಿ ಅವರ ನಿಖರವಾದ ಲೈನ್ ಮತ್ತು ಲೆಂಥ್, ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಮಧ್ಯಪ್ರದೇಶದ ಹೆಮ್ಮೆಯ ಪುತ್ರಿಗೆ ಕೋಟಿಯ ಸಿಹಿ
ಮತ್ತೊಂದೆಡೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, “ರಾಜ್ಯದ ಮಗಳು ದೇಶಕ್ಕೆ ಹೆಮ್ಮೆ ತಂದಿದ್ದಾಳೆ” ಎಂದು ಶ್ಲಾಘಿಸಿ, ಯುವ ಆಟಗಾರ್ತಿ ಕ್ರಾಂತಿ ಗೌಡ್ ಅವರಿಗೆ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತದ ಪರ ಅಚ್ಚರಿಯ ಪ್ರದರ್ಶನ ನೀಡಿದ ಆಟಗಾರ್ತಿಯರಲ್ಲಿ ಕ್ರಾಂತಿ ಗೌಡ್ ಕೂಡ ಒಬ್ಬರು. ಎಂಟು ಪಂದ್ಯಗಳಿಂದ ಒಟ್ಟು 9 ವಿಕೆಟ್‌ಗಳನ್ನು ಪಡೆದ ಅವರು, ಪಾಕಿಸ್ತಾನದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದು, ಪಂದ್ಯ ಶ್ರೇಷ್ಠ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದರು. ಇದಕ್ಕೂ ಮುನ್ನ, ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದು, ಈ ಸಾಧನೆ ಮಾಡಿದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರ.
ಈ ಇಬ್ಬರು ವೇಗಿಗಳ ಪ್ರದರ್ಶನವು, ಭಾರತದ ಚೊಚ್ಚಲ ವಿಶ್ವಕಪ್ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಲ್ಲದೆ, ತಂಡದ ಬೌಲಿಂಗ್ ವಿಭಾಗಕ್ಕೆ ಹೊಸ ಬಲವನ್ನು ನೀಡಿತ್ತು.
ಇದನ್ನೂ ಓದಿ: ನ.5 ರಂದು ಪ್ರಧಾನಿ ಮೋದಿ ವಿಶ್ವಕಪ್ ಚಾಂಪಿಯನ್ ಮಹಿಳಾ ತಂಡವನ್ನು ಭೇಟಿ ಸಾಧ್ಯತೆ



















