ನವದೆಹಲಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿದರೆ, ಆಟಗಾರ್ತಿಯರಿಗೆ ಭರ್ಜರಿ ಬಹುಮಾನ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸುತ್ತಿದೆ. ಹರ್ಮನ್‌ಪ್ರೀತ್ ಕೌರ್ ಬಳಗವು ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದರೆ, ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಪುರುಷರ ತಂಡಕ್ಕೆ ನೀಡಿದಷ್ಟೇ ದೊಡ್ಡ ಮೊತ್ತದ ಬಹುಮಾನವನ್ನು ಮಹಿಳಾ ತಂಡಕ್ಕೂ ನೀಡುವ ಸಾಧ್ಯತೆಯಿದೆ.
‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ (ಪಿಟಿಐ) ವರದಿಯ ಪ್ರಕಾರ, 2024ರ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ನೇತೃತ್ವದ ಪುರುಷರ ತಂಡಕ್ಕೆ ನೀಡಲಾಗಿದ್ದ 125 ಕೋಟಿ ರೂಪಾಯಿ ಬಹುಮಾನಕ್ಕೆ ಸರಿಸಮನಾದ ಆರ್ಥಿಕ ಪುರಸ್ಕಾರವನ್ನು ಮಹಿಳಾ ತಂಡಕ್ಕೂ ನೀಡಲು ಬಿಸಿಸಿಐನ ಉನ್ನತ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಈ ನಿರ್ಧಾರವನ್ನು ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲವಾದರೂ, ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಪುರುಷರು ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಮತ್ತು ಮನ್ನಣೆ ನೀಡುವ ತನ್ನ ಬದ್ಧತೆಯನ್ನು ಉಳಿಸಿಕೊಳ್ಳಲು ಮಂಡಳಿಯು ಉತ್ಸುಕವಾಗಿದೆ.
“ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಬೆಂಬಲಿಸುತ್ತದೆ. ಹಾಗಾಗಿ, ನಮ್ಮ ಹುಡುಗಿಯರು ವಿಶ್ವಕಪ್ ಗೆದ್ದರೆ, ಬಹುಮಾನವು ಪುರುಷರ ಜಾಗತಿಕ ಗೆಲುವಿಗೆ ಹೋಲಿಸಿದರೆ ಕಡಿಮೆಯಿರಬಾರದು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಕಪ್ ಗೆಲ್ಲುವ ಮೊದಲೇ ಇದನ್ನು ಪ್ರಕಟಿಸುವುದು ಸರಿಯಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಹಿಂದೆ ಕೂಡ ಬಿಸಿಸಿಐ ಮಹಿಳಾ ತಂಡದ ಸಾಧನೆಗಳನ್ನು ಗುರುತಿಸಿದೆ. 2017ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಒಂಬತ್ತು ರನ್‌ಗಳಿಂದ ಸೋತಾಗ, ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡಲಾಗಿತ್ತು. ಒಂದು ವೇಳೆ ಈ ಬಾರಿ ಭಾರತೀಯ ವನಿತೆಯರು ವಿಶ್ವಕಪ್ ಗೆದ್ದರೆ, ಪ್ರತಿಯೊಬ್ಬ ಆಟಗಾರ್ತಿಯು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ, ಇದು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ನಗದು ಬಹುಮಾನವಾಗಲಿದೆ.
ನವೆಂಬರ್ 2, ಭಾನುವಾರದಂದು ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಜೆಮಿಮಾ ರಾಡ್ರಿಗಸ್ ಅವರ ಅಮೋಘ ಆಟದ ನೆರವಿನಿಂದ ಆಸ್ಟ್ರೇಲಿಯಾವನ್ನು ಮಣಿಸಿರುವ ‘ವುಮೆನ್ ಇನ್ ಬ್ಲೂ’ ತಂಡ, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ. ದೇಶಾದ್ಯಂತ ಕುತೂಹಲ ಹೆಚ್ಚಾಗಿದ್ದು, ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ ತಂದುಕೊಡಲು ಹರ್ಮನ್‌ಪ್ರೀತ್ ಮತ್ತು ಅವರ ತಂಡ ಸಜ್ಜಾಗಿದೆ.
ಇದನ್ನೂ ಓದಿ : ಮಹಿಳಾ ವಿಶ್ವಕಪ್ ಫೈನಲ್‌ಗೆ ಸಂಗೀತದ ರಂಗು : ಮಧ್ಯಂತರದಲ್ಲಿ ವೇದಿಕೆ ಏರಲಿರುವ ಸುನಿಧಿ ಚೌಹಾಣ್


















