ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ನಗರದ ಚೆನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವದ ಸಂಭ್ರಮಾಚರಣೆ ಮಾಡಲಾಯಿತು. ಜಿಟಿಜಿಟಿ ಮಳೆಯಲ್ಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕನ್ನಡಾಭಿಮಾನಿಗಳು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು.
ಇದೇ ಮೊದಲ ಬಾರಿಗೆ ರಾಜ್ಯೋತ್ಸವದಲ್ಲಿ ಸಿಡಿಮದ್ದು ಸಿಡಿಸಲಾಯಿತು. ಬಾನಲ್ಲಿ ಕನ್ನಡಮ್ಮನ ಚಿತ್ತಾರ ಮೂಡಿತು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಕಾರ್ಯಕರ್ತರ ನೇತೃತ್ವದಲ್ಲಿ ಸಿಡಿಮದ್ದಿನ ಪ್ರದರ್ಶನ ನಡೆಸಲಾಯಿತು.
ಮಧ್ಯರಾತ್ರಿಯಲ್ಲೇ ಬಣ್ಣಬಣ್ಣದ ಸಿಡಿಮದ್ದುಗಳ ಚಿತ್ತಾರಕ್ಕೆ ಕನ್ನಡಿಗರು ಮಾರುಹೋಗಿದ್ದರು.. ವರ್ಷದಿಂದ ವರ್ಷಕ್ಕೆ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಘಮಲು ಹೆಚ್ಚಾಗುತ್ತಿದೆ. ಕನ್ನಡ ಧ್ವಜಗಳ ಹಾರಾಟ ನಡೆಸಿ, ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಬೆಳಗಾವಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಇದನ್ನೂ ಓದಿ: 70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ



















