ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ಅಯ್ಯರ್, ಇದೀಗ ನಾನು ಚೇತರಿಕೆಯ ಹಂತದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಶ್ರೇಯಸ್ ಅಯ್ಯರ್, ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನಿಮ್ಮಿಂದ ದೊರೆತ ಎಲ್ಲಾ ರೀತಿಯ ಹಾರೈಕೆ ಮತ್ತು ಬೆಂಬಲಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇವೆಲ್ಲವೂ ನನ್ನ ಪಾಲಿಗೆ ಬಹಳ ಅರ್ಥಪೂರ್ಣ ವಿಷಯ. ನನ್ನನ್ನು ನಿಮ್ಮ ಆಲೋಚನೆಗಳಲ್ಲಿ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಶ್ರೇಯಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಇದರೊಂದಿಗೆ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆ ಮೂಡಿದ್ದ ಆತಂಕಗಳು ದೂರವಾಗಿದೆ. ಅಲ್ಲದೆ ಚೇತರಿಕೆಯು ಪ್ರಗತಿಯಲ್ಲಿರುವ ಕಾರಣ ಅವರು ಇನ್ನೊಂದು ವಾರದಲ್ಲಿ ಡಿಸ್ಚಾರ್ಚ್ ಆಗಿ ಭಾರತಕ್ಕೆ ಮರಳಬಹುದು. ಅಲ್ಲದೆ ಮುಂಬೈನಲ್ಲಿ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಯಿದೆ.
ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದೆರಡು ತಿಂಗಳುಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ನವೆಂಬರ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಜನವರಿಯೊಳಗೆ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಭೋಪಾಲ್ ಏಮ್ಸ್ ವೈದ್ಯರ ಮದ್ಯದ ಪಾರ್ಟಿ: ಪೊಲೀಸರೊಂದಿಗೆ ಗಲಾಟೆ, ನಿಂದನೆ, ಪರಾರಿಯಾಗಲು ಯತ್ನ



















