ವಾಷಿಂಗ್ಟನ್ : ನೊಬೆಲ್ ಶಾಂತಿ ಪುರಸ್ಕಾರ ಕೈತಪ್ಪುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. ಭಾರತದ ಬಳಿಕ ಇದೀಗ ಚೀನಾದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಇದಲ್ಲದೆ, ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ಮತ್ತು ಸಭೆಗಳ ಸಾಧ್ಯತೆಯನ್ನು ಸಹ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಚೀನಾದ ಉತ್ಪನ್ನಗಳ ಮೇಲಿನ ಶೇ.100 ರಷ್ಟು ಸುಂಕವು ನವೆಂಬರ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅಮೆರಿಕವು ಚೀನಾದ ಮೇಲೆ ಬಲವಾದ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದ ಕೆಲವೇ ಗಂಟೆಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.
ನವೆಂಬರ್ 1 ರಿಂದ, ಚೀನಾದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಉತ್ಪನ್ನಗಳು ಅಸ್ತಿತ್ವದಲ್ಲಿರುವ ಸುಂಕಗಳ ಜೊತೆಗೆ ಶೇ.100 ಸುಂಕಕ್ಕೆ ಒಳಪಟ್ಟಿರುತ್ತವೆ. ನವೆಂಬರ್ 1 ರಿಂದ ಜಾರಿಗೆ ಬರಲಿರುವ ಅಪರೂಪದ ಭೂಮಿಯ ಖನಿಜಗಳ ಮೇಲೆ ರಫ್ತು ಮಿತಿಗಳನ್ನು ವಿಧಿಸುವ ಚೀನಾದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ತಮ್ಮ ಸಾಫ್ಟ್‌ವೇರ್ ಮೇಲಿನ ಸುಂಕ ಮತ್ತು ರಫ್ತು ನಿಯಂತ್ರಣಗಳನ್ನು ಹೆಚ್ಚಿಸಿದ್ದಾರೆ.



















