ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸ್ಲ್ಯಾಬ್ ಗಳನ್ನು ಇಳಿಕೆ ಮಾಡಿದ ಕಾರಣ ಸೆಪ್ಟೆಂಬರ್ 22ರಿಂದ ದೇಶದ ಶೇ.99ರಷ್ಟು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಉಳ್ಳವರು ಕಾರು, ಬೈಕ್, ಮೊಬೈಲ್, ವಾಷಿಂಗ್ ಮಷೀನ್ ಬೆಲೆಯಲ್ಲಿ ಎಷ್ಟು ಇಳಿಕೆಯಾಗಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನು ಮಧ್ಯಮ ವರ್ಗದವರು, ಬಡವರು ದಿನಬಳಕೆ ಉತ್ಪನ್ನಗಳ ಬೆಲೆಯಲ್ಲಿ ಎಷ್ಟು ಇಳಿಕೆಯಾಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್ ಯು ಎಲ್) ಕಂಪನಿಯು ಹಲವು ಉತ್ಪನ್ನಗಳ ಬೆಲೆ ಇಳಿಕೆ ಮಾಡಿದೆ.
ಹೌದು, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಯ ಹೊಸ ದರಪಟ್ಟಿಯಿಂದ ಮಧ್ಯಮ ವರ್ಗದವರು ಹಾಗೂ ಬಡವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪ್ರತಿದಿನ ಬಳಸುವ ಹಾರ್ಲಿಕ್ಸ್, ಡವ್ ಶಾಂಪೂ, ಕಿಸಾನ್ ಜಾಮ್, ಲಕ್ಸ್, ಲೈಫ್ ಬಾಯ್ ಸೋಪ್ ಸೇರಿ ಹತ್ತಾರು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.
340 ಎಂಎಲ್ ಡವ್ ಶಾಂಪೂ ಬೆಲೆ ಈಗ 490 ರೂಪಾಯಿ ಇದೆ. ಆದರೆ, ಸೆಪ್ಟೆಂಬರ್ 22ರ ನಂತರ ಇದರ ಬೆಲೆಯು 435 ರೂಪಾಯಿಗೆ ಇಳಿಕೆಯಾಗಲಿದೆ. 75 ಗ್ರಾಂ ಲೈಫ್ ಬಾಯ್ ಸಾಬೂನು ಇರುವ ಪ್ಯಾಕ್ ಬೆಲೆಯು 68 ರೂ.ನಿಂದ 60 ರೂ.ಗೆ ಇಳಿಕೆಯಾಗಲಿದೆ.
200 ಗ್ರಾಂ ಹಾರ್ಲಿಕ್ಸ್ ಬಾಟಲಿಯ ಬೆಲೆಯು 130 ರೂಪಾಯಿ ಬದಲಾಗಿ 110 ರೂ.ಗೆ ಇಳಿಕೆಯಾಗುತ್ತದೆ. 200 ಗ್ರಾಂ ಕಿಸಾನ್ ಜಾಮ್ ಬೆಲೆಯು 90ರಿಂದ 80 ರೂಪಾಯಿ ಆಗಲಿದೆ ಎಂದು ಕಂಪನಿಯೇ ಘೋಷಣೆ ಮಾಡಿದೆ. ಇವುಗಳ ಜತೆಗೆ ಕ್ಲೋಸ್ ಅಪ್ ಟೂತ್ ಪೇಸ್ಟ್, ಬೂಸ್ಟ್, ಬ್ರೂ ಕಾಫಿ ಸೇರಿ ಹಲವು ಉತ್ಪನ್ನಗಳ ಬೆಲೆಯೂ ಇಳಿಯಲಿದೆ.



















