ಕಠ್ಮಂಡು: ನೇಪಾಳವು ಕಳೆದ ಕೆಲವು ದಿನಗಳ ಪ್ರಕ್ಷುಬ್ಧ ರಾಜಕೀಯ ಹಿಂಸಾಚಾರಕ್ಕೆ ಅಂತ್ಯಹಾಡಿ ಇದೀಗ ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರು ದೇಶದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಗೆ ಕಾರಣವಾದ ಜೆನ್-ಝೆಡ್ ದಂಗೆಯ ಬೆನ್ನಲ್ಲೇ, ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್, ‘ಜೆನ್-ಝಿ’ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳು ಮತ್ತು ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ನಡುವೆ ನಡೆದ ಮಾತುಕತೆಯ ನಂತರ ಈ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
ಮುಖ್ಯ ನ್ಯಾಯಮೂರ್ತಿಯಿಂದ ಪ್ರಧಾನ ಮಂತ್ರಿಯವರೆಗೆ
73 ವರ್ಷದ ಸುಶೀಲಾ ಕಾರ್ಕಿ ಅವರು ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಜುಲೈ 2016 ರಿಂದ ಜೂನ್ 2017 ರವರೆಗೆ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಖ್ಯಾತಿ ಇವರದು. ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುವ ಮೂಲಕ ಅವರು ಮೆಚ್ಚುಗೆ ಮತ್ತು ವಿರೋಧ ಎರಡನ್ನೂ ಗಳಿಸಿದ್ದರು.
ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನೇಪಾಳವು ಬೃಹತ್ ಪ್ರತಿಭಟನೆಗಳಿಂದ ತತ್ತರಿಸುತ್ತಿರುವ ಈ ಸಮಯದಲ್ಲಿ, ಪ್ರಾಮಾಣಿಕ ನ್ಯಾಯಾಧೀಶೆ ಎಂಬ ಅವರ ಖ್ಯಾತಿಯು ಅವರನ್ನು ರಾಜಕೀಯದ ಮುನ್ನೆಲೆಗೆ ತಂದಿದೆ. ಪ್ರತಿಭಟನಾಕಾರರ ದೊಡ್ಡ ಗುಂಪು ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಬೇಕೆಂದು ಒತ್ತಾಯಿಸಿತ್ತು.
ಆರಂಭಿಕ ಜೀವನ ಮತ್ತು ಶಿಕ್ಷಣ
1952ರಲ್ಲಿ ಪೂರ್ವ ನೇಪಾಳದ ರೈತ ಕುಟುಂಬದಲ್ಲಿ ಏಳು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಸುಶೀಲಾ ಕಾರ್ಕಿ ಅವರ ಕುಟುಂಬವು, 1959ರಲ್ಲಿ ನೇಪಾಳದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಬಿಶ್ವೇಶ್ವರ್ ಪ್ರಸಾದ್ ಕೊಯಿರಾಲಾ ಅವರೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಕಾರ್ಕಿ ಅವರು 1975ರಲ್ಲಿ ಭಾರತದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ (BHU) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ, 1978ರಲ್ಲಿ ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು.
ನ್ಯಾಯಾಂಗ ವೃತ್ತಿ ಮತ್ತು ವಿವಾದ
2009ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಅವರ ನ್ಯಾಯಾಂಗ ವೃತ್ತಿಜೀವನ ಪ್ರಾರಂಭವಾಯಿತು. 2016ರ ಜುಲೈನಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯ ಹುದ್ದೆಗೇರಿದರು. ಏಪ್ರಿಲ್ 2017 ರಲ್ಲಿ, ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್ (ಮಾವೋವಾದಿ ಕೇಂದ್ರ) ಪಕ್ಷದ ಶಾಸಕರು ಅವರ ವಿರುದ್ಧ ಮಹಾಭಿಯೋಗ ನಿರ್ಣಯವನ್ನು ಮಂಡಿಸಿದರು, ಇದು ಅವರ ತಕ್ಷಣದ ಅಮಾನತಿಗೆ ಕಾರಣವಾಯಿತು. ಆದರೆ, ಈ ಪ್ರಯತ್ನ ವಿಫಲವಾಯಿತು. ನ್ಯಾಯಾಂಗದ ಸ್ವಾತಂತ್ರ್ಯದ ರಕ್ಷಣೆಗಾಗಿ ಸಾರ್ವಜನಿಕ ಪ್ರತಿಭಟನೆಗಳು ಭುಗಿಲೆದ್ದವು. ವಾರಗಳೊಳಗೆ ಮಹಾಭಿಯೋಗ ನಿರ್ಣಯವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ನಿವೃತ್ತರಾಗುವ ಒಂದು ತಿಂಗಳ ಮೊದಲು ಕಾರ್ಕಿ ತಮ್ಮ ಹುದ್ದೆಗೆ ಮರಳಿದರು.
ಭಾರತದೊಂದಿಗಿನ ಸಂಪರ್ಕ
ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅವರು ತಮ್ಮ ಭಾವೀ ಪತಿ ದುರ್ಗಾ ಪ್ರಸಾದ್ ಸುಬೇದಿ ಅವರನ್ನು ಭೇಟಿಯಾದರು. ಸುಬೇದಿ ಅವರು ನೇಪಾಳಿ ಕಾಂಗ್ರೆಸ್‌ನ ಯುವ ನಾಯಕರಾಗಿದ್ದರು ಮತ್ತು ಜೂನ್ 10, 1973 ರಂದು ನಡೆದ ನೇಪಾಳ ಏರ್‌ಲೈನ್ಸ್ ವಿಮಾನ ಅಪಹರಣದ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ನೇಪಾಳದಲ್ಲಿ ನಡೆದ ಮೊತ್ತಮೊದಲು ವಿಮಾನ ಹೈಜಾಕ್ ಪ್ರಕರಣವಾಗಿತ್ತು.
ನೇಪಾಳದ ಸರ್ಕಾರಿ ಬ್ಯಾಂಕ್‌ಗೆ ಸೇರಿದ ಸುಮಾರು 4 ಮಿಲಿಯನ್ ನೇಪಾಳಿ ರೂಪಾಯಿಗಳನ್ನು ಸಾಗಿಸುತ್ತಿದ್ದ ವಿಮಾನವನ್ನು ಬಿಹಾರದ ಪೂರ್ಣಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್‌ನಲ್ಲಿ ಇಳಿಸಲು ಒತ್ತಾಯಿಸಲಾಯಿತು. ಈ ಹಣವನ್ನು ರಾಜಪ್ರಭುತ್ವದ ವಿರುದ್ಧ ನೇಪಾಳಿ ಕಾಂಗ್ರೆಸ್‌ನ ಸಶಸ್ತ್ರ ಹೋರಾಟಕ್ಕೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಯಿತು. ಅಪಹರಣದಲ್ಲಿ ಭಾಗಿಯಾಗಿದ್ದ ಸುಬೇದಿ ಮತ್ತು ಇತರರನ್ನು ಭಾರತೀಯ ಅಧಿಕಾರಿಗಳು ಒಂದು ವರ್ಷದೊಳಗೆ ಬಂಧಿಸಿ, ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಿದರು.
ಅಧಿಕಾರಕ್ಕೆ ತಂದ ಪ್ರತಿಭಟನೆಗಳು
ಇತ್ತೀಚೆಗೆ ಕೆ.ಪಿ.ಶರ್ಮಾ ಓಲಿ ಸರ್ಕಾರವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನವೆಂಬಂತೆ ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ ಹೇರಿತ್ತು. ಇದರ ವಿರುದ್ಧ ಯುವ ಸಮೂಹ ಬೀದಿಗಿಳಿಯಿತು. ಕರ್ಫ್ಯೂ ಉಲ್ಲಂಘಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮವಾಗಿ ಕನಿಷ್ಠ 51 ಜನರು ಸಾವನ್ನಪ್ಪಿ, 1,300ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದಂಗೆಯು ಅಂತಿಮವಾಗಿ ಓಲಿ ಅವರ ರಾಜೀನಾಮೆಗೆ ಮತ್ತು ಸುಶೀಲಾ ಕಾರ್ಕಿ ಅವರ ನೇಮಕಕ್ಕೆ ಕಾರಣವಾಯಿತು.



















