ನವದೆಹಲಿ: ದೇಶದಲ್ಲಿ ಏರಿಕೆಯಾಗುತ್ತಿರುವ ಬೊಜ್ಜು ಅಥವಾ ಸ್ಥೂಲಕಾಯ ಸಮಸ್ಯೆಯ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ “ರಾಷ್ಟ್ರೀಯ ಬೊಜ್ಜು ನಿಯಂತ್ರಣ ಮಾರ್ಗಸೂಚಿ”ಯನ್ನು ರೂಪಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅತಿಕಾಯ ಸಮಸ್ಯೆಯ ಕುರಿತು ಮನ್ ಕೀ ಬಾತ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ.

ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಈ ವಿಷಯದ ಕುರಿತು ಮೊದಲ ಸಭೆ ನಡೆದಿದೆ. ಸಭೆಯಲ್ಲಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು, ದೇಶದ ಪ್ರಮುಖ ಅಂತಃಸ್ರಾವಶಾಸ್ತ್ರಜ್ಞರು (endocrinologists), ಪೌಷ್ಟಿಕತಜ್ಞರು, ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕರು ಮತ್ತು ಮಧುಮೇಹ ತಜ್ಞರು ಭಾಗವಹಿಸಿದ್ದರು.
ಇದುವರೆಗೆ ಭಾರತವು ಬೊಜ್ಜಿಗೆಂದೇ ಮೀಸಲಾದ ತನ್ನದೇ ಆದ ರಾಷ್ಟ್ರೀಯ ಮಾರ್ಗಸೂಚಿಯನ್ನು ಹೊಂದಿರಲಿಲ್ಲ. ಆರೋಗ್ಯ ವೃತ್ತಿಪರರು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಾನದಂಡಗಳನ್ನೇ ಅವಲಂಬಿಸಿದ್ದರು. ಈ ಹೊಸ ಉಪಕ್ರಮವು ಭಾರತೀಯ ದತ್ತಾಂಶವನ್ನು ನಿರ್ಮಿಸುವ ಗುರಿಯನ್ನೂ ಹೊಂದಿದೆ.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, “ಬೊಜ್ಜು ಭಾರತದಲ್ಲಿ ‘ಮೌನ ಬಿಕ್ಕಟ್ಟಾಗಿ’ ಹೊರಹೊಮ್ಮುತ್ತಿದೆ. ಪ್ರತಿ ಕುಟುಂಬವು ಅಡುಗೆ ಎಣ್ಣೆಯ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡಲು ನಿರ್ಧರಿಸಿದರೆ, ಅದು ರಾಷ್ಟ್ರದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತದೆ” ಎಂದು ಎಚ್ಚರಿಸಿದ್ದರು.
ಮಾರ್ಗಸೂಚಿಯಲ್ಲೇನಿದೆ?
ಹಿಂದಿನ ಮಾರ್ಗಸೂಚಿಗಳು ಚಿಕಿತ್ಸೆಗೆ ಸೀಮಿತವಾಗಿದ್ದವು. ಆದರೆ, ಈ ಹೊಸ ಮಾರ್ಗಸೂಚಿಯು ಚಿಕಿತ್ಸೆಯ ಆಚೆಗೆ, ಆರಂಭಿಕ ಹಂತದಲ್ಲೇ ಬೊಜ್ಜು ಹಾಗೂ ಸ್ಥೂಲಕಾಯ ನಿಯಂತ್ರಣ, ತಪಾಸಣೆ, ರೋಗನಿರ್ಣಯ ಮತ್ತು ತಡೆಗಟ್ಟುವಿಕೆಯ ತಂತ್ರಗಳ ಮೇಲೆ ಹೆಚ್ಚು ಗಮನ ಹರಿಸಲಿದೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಜಿಎಲ್‌ಪಿ-1 ನಂತಹ ಹೊಸ ತೂಕ ಇಳಿಕೆಯ ಔಷಧಿಗಳ ಬಳಕೆಯ ಬಗ್ಗೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖವಿರುವ ನಿರೀಕ್ಷೆಯಿದೆ.
ಆತಂಕಕಾರಿ ಅಂಕಿ-ಅಂಶಗಳು
ಪ್ರಸ್ತುತ, ಪ್ರತಿ ನಾಲ್ಕು ಭಾರತೀಯರಲ್ಲಿ ಒಬ್ಬರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಕಳೆದ ದಶಕದಲ್ಲಿ ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಇದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ, ಶೇ.24ರಷ್ಟು ಮಹಿಳೆಯರು ಮತ್ತು ಶೇ. 23ರಷ್ಟು ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. 5 ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣವು ಶೇ. 2.1ರಿಂದ (NFHS-4) ಶೇ. 3.4ಕ್ಕೆ (NFHS-5) ಏರಿಕೆಯಾಗಿದೆ.
ಹೊಟ್ಟೆಯ ಬೊಜ್ಜು ದೊಡ್ಡ ಸಮಸ್ಯೆ
ಕೇವಲ ದೇಹದ ತೂಕ ಸೂಚ್ಯಂಕ (ಬಿಎಂಐ) ಬೊಜ್ಜನ್ನು ಅಳೆಯಲು ಸಾಕಾಗುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಸಮೀಕ್ಷೆಯು ಸೊಂಟದ ಸುತ್ತಳತೆಯನ್ನು ಪರಿಚಯಿಸಿದ್ದು, ಭಾರತದಲ್ಲಿ ಶೇ. 40ರಷ್ಟು ಮಹಿಳೆಯರು ಮತ್ತು ಶೇ. 12ರಷ್ಟು ಪುರುಷರು ಹೊಟ್ಟೆಯ ಬೊಜ್ಜು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ.
ಕೇರಳ (ಶೇ. 65.4), ಪಂಜಾಬ್ (ಶೇ. 62.5), ದೆಹಲಿ (ಶೇ. 59) ಮತ್ತು ತಮಿಳುನಾಡಿನಲ್ಲಿ (ಶೇ. 57.9) ಹೊಟ್ಟೆಯ ಬೊಜ್ಜಿನ ಪ್ರಮಾಣ ಅತಿ ಹೆಚ್ಚಿದ್ದರೆ, ಜಾರ್ಖಂಡ್ (ಶೇ. 23.9) ಮತ್ತು ಮಧ್ಯಪ್ರದೇಶದಲ್ಲಿ (ಶೇ. 24.9) ಕಡಿಮೆ ಇದೆ ಎಂದೂ ಸಮೀಕ್ಷೆ ಹೇಳಿದೆ.