ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಹಂಸಲ್‌ಪುರ್‌ನಲ್ಲಿರುವ ಸುಜುಕಿ ಮೋಟಾರ್ ಘಟಕದಲ್ಲಿ ಭಾರತದ ವಾಹನ ಉದ್ಯಮಕ್ಕೆ ಹೊಸ ದಿಕ್ಕು ತೋರಿಸುವ ಯೋಜನೆಗೆ ಚಾಲನೆ ನೀಡಿದರು. ಭಾರತದಲ್ಲೇ ಸಂಪೂರ್ಣವಾಗಿ ತಯಾರಾದ ಮೊದಲ ಮಾರುತಿ ಸುಜುಕಿ ಇ-ವಿಟಾರಾ ಕಾರನ್ನು ಉತ್ಪಾದನಾ ಘಟಕದಿಂದ ಹೊರತರಲು ಹಸಿರು ನಿಶಾನೆ ತೋರಿದರು.
ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಜಪಾನ್ ರಾಯಭಾರಿ ಕೀಚಿ ಒನೊ ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಭಾರತದ ಆತ್ಮನಿರ್ಭರತೆಯ ಪಯಣದಲ್ಲಿ ಇದೊಂದು ವಿಶೇಷ ದಿನ. ಇಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳು ವಿಶ್ವದ 100 ದೇಶಗಳಿಗೆ ರಫ್ತಾಗಲಿವೆ” ಎಂದು ಬಣ್ಣಿಸಿದರು. ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಮೊದಲ ಇ-ವಿಟಾರಾ ಕಾರನ್ನು ಯುನೈಟೆಡ್ ಕಿಂಗ್‌ಡಮ್‌ಗೆ (ಯುಕೆ) ರಫ್ತು ಮಾಡಲಾಗುತ್ತಿದೆ.
ಇ-ವಿಟಾರಾ ವೈಶಿಷ್ಟ್ಯವೇನು?
ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕಳೆದ ವರ್ಷ ಯುರೋಪ್‌ನಲ್ಲಿ ಜಾಗತಿಕವಾಗಿ ಪರಿಚಯಿಸಲಾಗಿತ್ತು ಮತ್ತು 2025ರ ಭಾರತ್ ಮೊಬಿಲಿಟಿ ಶೋನಲ್ಲಿ ಭಾರತದಲ್ಲಿ ಪ್ರದರ್ಶಿಸಲಾಗಿತ್ತು. ಇದನ್ನು ಟೊಯೊಟಾ ಸಹಯೋಗದೊಂದಿಗೆ ನಿರ್ಮಿಸಲಾದ 40ಪಿಎಲ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟೊಯೊಟಾ ಕೂಡ ಇದೇ ಮಾದರಿಯನ್ನು ‘ಅರ್ಬನ್ ಕ್ರೂಸರ್ ಇವಿ’ ಎಂಬ ಹೆಸರಿನಲ್ಲಿ ಉತ್ಪಾದಿಸಲಿದೆ.
ಈ ಕಾರು 49ಕೆಡಬ್ಲ್ಯುಎಚ್ ಮತ್ತು 61ಕೆಡಬ್ಲ್ಯುಎಚ್ ಎಂಬ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರಲಿದೆ. ದೊಡ್ಡ ಬ್ಯಾಟರಿ ಮಾದರಿಯು ಡ್ಯುಯಲ್-ಮೋಟರ್ ಆಲ್-ವೀಲ್ ಡ್ರೈವ್ (AllGrip-e) ವ್ಯವಸ್ಥೆಯನ್ನು ಹೊಂದಿರುತ್ತದೆ.
ನಿರೀಕ್ಷಿತ ಬೆಲೆ ಮತ್ತು ಪೈಪೋಟಿ
ಭಾರತದಲ್ಲಿ ಇ-ವಿಟಾರಾದ ಆರಂಭಿಕ ಎಕ್ಸ್ ಶೋರೂಂ ಬೆಲೆ ಸುಮಾರು 20 ಲಕ್ಷ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಇದು ಮಹೀಂದ್ರಾ ಬಿಇ6, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮತ್ತು ಎಂಜಿ ಝೆಡ್ಎಸ್ ಇವಿ (MG ZS EV) ನಂತಹ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಬ್ಯಾಟರಿ ಘಟಕಕ್ಕೂ ಚಾಲನೆ
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಹೈಬ್ರಿಡ್ ವಾಹನಗಳಿಗೆ ಬೇಕಾದ ಲಿ-ಐಯಾನ್ ಬ್ಯಾಟರಿ ಸೆಲ್‌ಗಳು ಮತ್ತು ಎಲೆಕ್ಟ್ರೋಡ್‌ಗಳ ತಯಾರಿಕಾ ಘಟಕವನ್ನೂ ಉದ್ಘಾಟಿಸಲಿದ್ದಾರೆ. ಇದು ತೋಷಿಬಾ, ಡೆನ್ಸೊ ಮತ್ತು ಸುಜುಕಿ ಕಂಪನಿಗಳ ಜಂಟಿ ಸಹಯೋಗದ ಯೋಜನೆಯಾಗಿದ್ದು, ಭಾರತವನ್ನು ಎಲೆಕ್ಟ್ರಿಕ್ ವಾಹನ ತಯಾರಿಕೆಯ ಜಾಗತಿಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.



















