ಗುರುಗ್ರಾಮ: ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (SMIPL), ತನ್ನ ಜನಪ್ರಿಯ 125cc ಸ್ಕೂಟರ್ ಆದ ಸುಜುಕಿ ಅವೆನಿಸ್ಗೆ ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆ ಪರಿಚಯಿಸಿದೆ. ಈ ಹೊಸ ‘ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್ ನಂ. 2 / ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್’ ಬಣ್ಣದ ಸಂಯೋಜನೆಯು ಸ್ಕೂಟರ್ನ ಸ್ಪೋರ್ಟಿ ವಿನ್ಯಾಸಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ಯುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ.
ಈ ಹೊಸ ಬಣ್ಣದ ಆಯ್ಕೆಯು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್/ಪರ್ಲ್ ಗ್ಲೇಸಿಯರ್ ವೈಟ್, ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್/ಪರ್ಲ್ ಮೀರಾ ರೆಡ್, ಮತ್ತು ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳ ಶ್ರೇಣಿಗೆ ಸೇರ್ಪಡೆಯಾಗಿದೆ.
ಈ ಬಿಡುಗಡೆಯ ಬಗ್ಗೆ ಮಾತನಾಡಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ದೀಪಕ್ ಮುತ್ರೇಜಾ, “ಸವಾರರ ಬದಲಾಗುತ್ತಿರುವ ಆದ್ಯತೆಗಳಿಗೆ ಸರಿಹೊಂದುವ ಉತ್ಪನ್ನಗಳನ್ನು ನೀಡುವುದರ ಮೇಲೆ ನಾವು ಗಮನಹರಿಸುತ್ತೇವೆ. ಅವೆನಿಸ್ನ ಈ ಹೊಸ ಬಣ್ಣವು ಅದರ ಸ್ಪೋರ್ಟಿ ವ್ಯಕ್ತಿತ್ವಕ್ಕೆ ಮತ್ತಷ್ಟು ಬಲ ತುಂಬಲಿದ್ದು, ನಮ್ಮ ಯುವ ಗ್ರಾಹಕರಿಗೆ ತಮ್ಮ ಶೈಲಿಯನ್ನು ವ್ಯಕ್ತಪಡಿಸಲು ಇನ್ನೊಂದು ಅತ್ಯಾಕರ್ಷಕ ಮಾರ್ಗವನ್ನು ಒದಗಿಸುತ್ತದೆ,” ಎಂದು ಹೇಳಿದರು.
ಎಂಜಿನ್ ಮತ್ತು ವೈಶಿಷ್ಟ್ಯಗಳು
ಸುಜುಕಿ ಅವೆನಿಸ್ 124.3cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಇದು 6,750rpm ನಲ್ಲಿ 8.7bhp ಶಕ್ತಿ ಮತ್ತು 5,500rpm ನಲ್ಲಿ 10Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸುಜುಕಿ ಇಕೋ ಪರ್ಫಾರ್ಮೆನ್ಸ್ (SEP) ತಂತ್ರಜ್ಞಾನವು ಉತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ನಡುವೆ ಸಮತೋಲನವನ್ನು ಖಚಿತಪಡಿಸುತ್ತದೆ. ಈ ಎಂಜಿನ್ ಇತ್ತೀಚಿನ BS6 OBD-2B ಹೊರಸೂಸುವಿಕೆ ನಿಯಮಗಳಿಗೆ ಅನುಗುಣವಾಗಿದೆ.
ಸ್ಕೂಟರ್ನ ವಿನ್ಯಾಸವು ಅತ್ಯಾಕರ್ಷಕವಾಗಿದ್ದು, ಬಾಡಿ-ಮೌಂಟೆಡ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ಗಳು, ಸ್ಪ್ಲಿಟ್ ಗ್ರಾಬ್ ರೈಲ್ಗಳುಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್ಬಿ-ಸಜ್ಜಿತ ಫ್ರಂಟ್ ಬಾಕ್ಸ್, ಹೊರಗಿನಿಂದಲೇ ಇಂಧನ ತುಂಬಿಸುವ ಮುಚ್ಚಳ, ಉದ್ದವಾದ ಮತ್ತು ಆರಾಮದಾಯಕವಾದ ಸೀಟ್, ಹಾಗೂ 21.8-ಲೀಟರ್ ಅಂಡರ್-ಸೀಟ್ ಸ್ಟೋರೇಜ್ನಂಥ ವೈಶಿಷ್ಟ್ಯಗಳೂ ಇವೆ. ನಗರ ಸವಾರಿಗೆ ಅನುಕೂಲವಾಗುವಂತೆ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಕಂಬೈನ್ಡ್ ಬ್ರೇಕ್ ಸಿಸ್ಟಮ್ (CBS), ಮತ್ತು ಸೈಡ್ ಸ್ಟ್ಯಾಂಡ್ ಇಂಟರ್ಲಾಕ್ನಂಥ ಸುರಕ್ಷತಾ ಫೀಚರ್ಗಳನ್ನು ನೀಡಲಾಗಿದೆ.
ಬೆಲೆ ಮತ್ತು ಲಭ್ಯತೆ
ಸುಜುಕಿ ಅವೆನಿಸ್ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ:
- ಸ್ಟ್ಯಾಂಡರ್ಡ್ ಆವೃತ್ತಿ: 91,400 ರೂಪಾಯಿ (ಎಕ್ಸ್ ಶೋರೂಂ, ದೆಹಲಿ)
- ರೈಡ್ ಕನೆಕ್ಟ್ ಆವೃತ್ತಿ: 93,200 ರೂಪಾಯಿ (ಎಕ್ಸ್ ಶೋರೂಂ, ದೆಹಲಿ)
ಈ ಎರಡೂ ಮಾದರಿಗಳು, ಹೊಸ ಬಣ್ಣದ ಆಯ್ಕೆಯೊಂದಿಗೆ, ಭಾರತದಾದ್ಯಂತ ಎಲ್ಲಾ ಅಧಿಕೃತ ಸುಜುಕಿ ದ್ವಿಚಕ್ರ ವಾಹನ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿವೆ.
ಗ್ರಾಹಕರಿಗೆ ಸ್ಕೂಟರ್ ಖರೀದಿಯನ್ನು ಸುಲಭಗೊಳಿಸಲು, ಸುಜುಕಿ 100% ವರೆಗೆ ಸಾಲದ ಅನುಮೋದನೆ ಮತ್ತು ನೋ-ಹೈಪೋಥಿಕೇಶನ್ನಂಥ ಆಕರ್ಷಕ ಹಣಕಾಸು ಯೋಜನೆಗಳನ್ನು ನೀಡುತ್ತಿದೆ. ಇದಲ್ಲದೆ, ಪ್ರಸ್ತುತ ನಡೆಯುತ್ತಿರುವ ‘ಸುಜುಕಿ ರೈಡಿಂಗ್ ಫೆಸ್ಟ್’ನ ಭಾಗವಾಗಿ, ಹೊಸ ಸುಜುಕಿ ದ್ವಿಚಕ್ರ ವಾಹನವನ್ನು ಖರೀದಿಸುವ ಗ್ರಾಹಕರು ವಿಶೇಷ ಉಡುಗೊರೆಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ.



















