ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಆರೋಪವೊಂದು ಕೇಳಿ ಬಂದಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಈ ಆರೋಪದ ಹಿನ್ನೆಲೆಯಲ್ಲಿ ವಕೀಲೆ ಸುಧಾ ಕಟ್ವಾ ದೂರು ನೀಡಿದ್ದು, ಆ ದೂರು ಆಧರಿಸಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗರಾಜನಗರದ ಬಿಜಿಎಸ್ ಬ್ಲೂಮ್ ಫೀಲ್ಡ್ ಶಾಲೆಯ ಮುಖ್ಯಸ್ಥ ಬಿ.ಗುರಪ್ಪನಾಯ್ಡು ಹಾಗೂ ಅವರ ಪತ್ನಿ, ಸಂಸ್ಥೆಯ ಟ್ರಸ್ಟಿ ಸುನಿತಾ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಶಾಲೆ ಆರಂಭಿಸುವವರು, ಶಿಕ್ಷಕರು ಹಾಗೂ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಿಬಿಎಪಿಯಿಂದ ಕಟ್ಟಡದ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಹಾಗೂ ಕಟ್ಟಡದ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆನ್ನುವುದು ಕಡ್ಡಾಯವಾಗಿರುತ್ತದೆ. ಗುರಪ್ಪನಾಯ್ಡು ಹಾಗೂ ಸುನಿತಾ ಅವರು ಗುರಪ್ಪ ನಾಯ್ಡು ಹಾಗೂ ಸುನಿತಾ ಅವರು 2020ರಲ್ಲಿ ಶಾಲೆ ಆರಂಭಿಸಿದ್ದರು. ಆದರೆ, ಕಟ್ಟಡ ಕಾಮಗಾರಿ ಮುಕ್ತಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ಎಫ್ ಐಆರ್ ದಾಖಲಾಗಿದ್ದು, ಕ್ರಮ ಕೈಗೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ.



















