ಬೆಳ್ತಂಗಡಿ/ಧರ್ಮಸ್ಥಳ : ಕಳೆದ ಕೆಲವು ದಿನಗಳಿಂದ ಧರ್ಮಸ್ಥಳ ಸಮೀಪದ ಬಳಿಯಾರ್ ಬಳಿ ರಸ್ತೆಯಲ್ಲಿ ನಸುಕಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ.
ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದಿದೆ. ಸ್ಥಳದಲ್ಲಿದ್ದ ಮಕ್ಕಳು ಆನೆಯನ್ನು ಕಂಡು ಭಯಭೀತರಾಗಿದ್ದು, ಪಕ್ಕದಲ್ಲೇ ಇದ್ದ ಅಂಗಡಿಯೊಳಗೆ ಸೇರಿ ಪಾರಾಗಿದ್ದಾರೆನ್ನಲಾಗಿದೆ.
ಬಳಿಕ ಆನೆ ಮರಳಿ ಕಾಡಿಗೆ ತೆರಳಿದೆ. ಎರಡು ವಾರಗಳ ಹಿಂದೆಯಷ್ಟೇ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎಂಬಲ್ಲಿ ಕಾಡಾನೆ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಕೊಂದಿತ್ತು. ಈ ಬೆನ್ನಲ್ಲೇ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.



















