ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾದ 10 ತಿಂಗಳ ಹೆಣ್ಣುಮಗು ನೀತಿಕಾಳನ್ನು ‘ರಾಜ್ಯದ ಮಗು’ ಎಂದು ಘೋಷಿಸಲಾಗಿದೆ. ಮುಖ್ಯಮಂತ್ರಿ ಸುಖ-ಆಶ್ರಯ ಯೋಜನೆಯಡಿ ಮಗುವಿನ ಶಿಕ್ಷಣ ಮತ್ತು ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದೆ.
ಜೂನ್ 30 ಮತ್ತು ಜುಲೈ 1ರ ರಾತ್ರಿ ಮಂಡಿ ಜಿಲ್ಲೆಯ ತಾಲ್ವಾರ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದ ದುರಂತದಲ್ಲಿ ನೀತಿಕಾ ತನ್ನ ಪೋಷಕರನ್ನು ಮತ್ತು ಅಜ್ಜಿಯನ್ನು ಕಳೆದುಕೊಂಡಿದ್ದಾಳೆ. ಪ್ರವಾಹದ ನೀರು ಮನೆಗೆ ನುಗ್ಗುತ್ತಿದ್ದಾಗ, ಅದನ್ನು ತಡೆಯಲು ಮನೆಯಿಂದ ಹೊರಗೆ ಹೋದ ಮಗುವಿನ ತಂದೆ ರಮೇಶ್ (31) ಮೃತಪಟ್ಟಿದ್ದಾರೆ. ಅವರಿಗೆ ಸಹಾಯ ಮಾಡಲೆಂದು ಧಾವಿಸಿದ್ದ ತಾಯಿ ರಾಧಾ ದೇವಿ (24) ಮತ್ತು ಅಜ್ಜಿ ಪೂರ್ಣು ದೇವಿ (59) ನಾಪತ್ತೆಯಾಗಿದ್ದಾರೆ. 10 ತಿಂಗಳ ನೀತಿಕಾ ಮಾತ್ರವೇ ಬದುಕುಳಿದಿದ್ದು, ಆಕೆಯ ತನ್ನ ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದಳು.
ಹಿಮಾಚಲ ಪ್ರದೇಶ ಸರ್ಕಾರವು ‘ಮುಖ್ಯಮಂತ್ರಿ ಸುಖ-ಆಶ್ರಯ ಯೋಜನೆ’ ಅಡಿಯಲ್ಲಿ ಈಗ ನೀತಿಕಾಳನ್ನು ‘ರಾಜ್ಯದ ಮಗು’ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ಮಾತನಾಡಿದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ, “ಮಗುವಿನ ಪಾಲನೆ, ಶಿಕ್ಷಣ ಮತ್ತು ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ. ಈ ಮಗು ಭವಿಷ್ಯದಲ್ಲಿ ವೈದ್ಯೆ, ಇಂಜಿನಿಯರ್ ಅಥವಾ ಅಧಿಕಾರಿಯಾಗಲು ಬಯಸಿದರೆ, ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ” ಎಂದು ತಿಳಿಸಿದ್ದಾರೆ.

2023ರಲ್ಲಿ ಪ್ರಾರಂಭವಾದ ಸುಖ-ಆಶ್ರಯ ಯೋಜನೆಯು ಅನಾಥ ಮಕ್ಕಳಿಗೆ ಆಹಾರ, ವಸತಿ, ಉನ್ನತ ಶಿಕ್ಷಣ, ಮತ್ತು ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ, ಬಟ್ಟೆ ಮತ್ತು ಹಬ್ಬದ ಭತ್ಯೆ, ವೈಯಕ್ತಿಕ ಖರ್ಚುಗಳಿಗೆ ಸ್ಟೈಪಂಡ್, ಮತ್ತು ಮನೆ ನಿರ್ಮಾಣಕ್ಕೆ ಅನುದಾನದಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ.
ದುರಂತ ನಡೆದ ರಾತ್ರಿ, ನೆರೆಮನೆಯ ಪ್ರೇಮ್ ಸಿಂಗ್ ಅವರು ಮಗು ಮನೆಯಲ್ಲಿ ಒಂಟಿಯಾಗಿ ಅಳುತ್ತಿರುವುದನ್ನು ಕಂಡು, ಆಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಸದ್ಯಕ್ಕೆ ನೀತಿಕಾಳನ್ನು ತಾಲ್ವಾರ ಗ್ರಾಮದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಶಿಕೌರಿ ಗ್ರಾಮದಲ್ಲಿರುವ ಆಕೆಯ ತಂದೆಯ ತಂಗಿ (ಅತ್ತೆ) ಕಿರ್ಣಾ ದೇವಿ ನೋಡಿಕೊಳ್ಳುತ್ತಿದ್ದಾರೆ.



















