ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು.ಗೂ ಹೆಚ್ಚಿರಬಹುದು ಎಂದು ವರದಿಯೊಂದು ತಿಳಿಸಿದೆ.
ಒಂದು ವೇಳೆ ಇದು ಖಚಿತವಾದರೆ, ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ನಡೆಸಿದಂತಹ ವಂಚನೆ
ಪಿಎನ್‌ಬಿ ವಂಚನೆ ಪ್ರಕರಣಕ್ಕಿಂತಲೂ ದೊಡ್ಡ ಹಗರಣವಾಗಲಿದೆ. ಯಸ್ ಬ್ಯಾಂಕ್‌ನಿಂದ 3000 ಕೋಟಿ ರು.ಸಾಲ ಪಡೆದಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾ, ಇದೇ ಅವಧಿಯಲ್ಲಿ ಎಫ್‌ಡಿ ರೂಪದಲ್ಲಿ ಯಸ್ ಬ್ಯಾಂಕ್‌ನಲ್ಲಿ 2850 ಕೋಟಿ ರು. ಮೊತ್ತದ ಬಾಂಡ್ ಖರೀದಿಸಿತ್ತು. ಬಳಿಕ ಅದನ್ನು ವಸೂಲಿಯಾಗದ ಮೊತ್ತ ಎಂದು ಕಂಪನಿಗಳ ದಾಖಲೆಗಳಲ್ಲಿ ನಮೂದಿಸಿ ಆ ಹಣವನ್ನು ಲಪಟಾಯಿಸಲಾಗಿದೆ ಎಂಬುದು ಇಡಿ ಶಂಕೆ ವ್ಯಕ್ತಪಡಿಸಿದೆ.
ಆರ್‌ಕಾಂ ಕೆನರಾ ಬ್ಯಾಂಕ್ ಗೆ 1,050 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಂಚನೆ ಮಾಡಿದ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ. ರಿಲಯನ್ಸ್ ಇನ್ಫ್ರಾ ಕಂಪನಿಯು, ತನ್ನ ಸಾವಿರಾರು ಕೋಟಿ ರು.ಹಣವನ್ನು ಠೇವಣಿಗಳ ರೂಪದಲ್ಲಿ ಅವರದ್ದೇ ಒಡೆತನದ ರಾಗಾ ಸಮೂಹದ ಕಂಪನಿಗಳಿಗೆ ವರ್ಗಾಯಿಸಿತ್ತು. ಬಳಿಕ ಈ ಪೈಕಿ 4 ಕೋಟಿ ರು.ಗಳನ್ನು ಮಾತ್ರವೇ ನಗದು ರೂಪದಲ್ಲಿ ಸ್ವೀಕರಿಸಿತ್ತು. ಉಳಿದ 5480 ಕೋಟಿ ರು. ಮೊತ್ತವನ್ನು ಹೇರ್‌ಕಟ್ ಎಂದು ತೋರಿಸಿದ್ದರೆ, 6499 ಕೋಟಿ ರು. ಹಣವನ್ನು ಬೇರೆ ಬೇರೆ ಲೆಕ್ಕಾಚಾರ ತೋರಿಸಿ ಚುಕ್ತಾ ಮಾಡಲಾಗಿದೆ. ಈ ವ್ಯವಹಾರವೊಂದರಲ್ಲೇ 10000 ಕೋಟಿ ರು.ಹಣವನ್ನು ಅಕ್ರಮವಾಗಿ ಬೇರೆ ಕಡೆಗೆ ವರ್ಗಾಯಿಸಿ ಅಕ್ರಮ ಎಸಗಲಾಗಿದೆ ಎಂದು ಇಡಿ ಆರೋಪಿಸಿದೆ.