ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಚಿವರುಗಳ ಜತೆ ಸರಣಿ ಸಭೆಗಳನ್ನು ನಡೆಸಿರುವುದನ್ನು ಟೀಕಿಸಿರುವ ಬಿಜೆಪಿ-ಜೆಡಿಎಸ್, ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿಯಾಗಿದೆಯೇ ಎಂದು ವಾಗ್ದಾಳಿ ನಡೆಸಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಸಂಂಧಿಸಿದಂತೆ ಪ್ರತಿಕ್ರಿಯಿಸಿ, ಲಾಟರಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡು ಕರ್ನಾಟಕದಲ್ಲಿ ರಣದೀಪ್ ಆಡಳಿತ ಹೇರಿದೆ, ನಾಳೆ ನಡೆಯುವ ಸಂಪುಟ ಸಭೆಯೂ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ನಡೆಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಅತೃಪ್ತ ಶಾಸಕರು ದೂರು ದುಮ್ಮಾನ ಕೇಳುತ್ತಿರುವ, ಮಂತ್ರಿಗಳ ಸಾಧನೆ ಪರಾಮರ್ಶೆ ಮಾಡುತ್ತಿರುವ ಸುರ್ಜೇವಾಲ ಅವರು ನಾಳೆ ವಿಧಾನಸೌಧದಲ್ಲಿ ನಡೆಯುವ ಸಂಪುಟ ಸಭೆಗೆ ಬಂದು ತಾವೇ ಅಧ್ಯಕ್ಷತೆ ವಹಿಸಿದ್ದರೂ ಅಚ್ಚರಿಪಡಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಶಾಸಕರ ಬೆಂಬಲ ಇಲ್ಲ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡಲು ರಾಹುಲ್‌ಗಾಂಧಿ ಅವರಿಗೂ ಶಕ್ತಿ ಇಲ್ಲ ಎಂದು ಟೀಕಿಸಿದ್ದಾರೆ. ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸಬಲ್ಲ ಒಬ್ಬ ನಾಯಕನೂ ಇಲ್ಲದೆ ಕಾಂಗ್ರೆಸ್ ಹೈಕಮಾಂಡ್ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.



















