ನಾಗಪಟ್ಟಿಣಂ: ತಮಿಳು ಚಿತ್ರರಂಗದ ಹಿರಿಯ ಸ್ಟಂಟ್ ಕಲಾವಿದ ಎಸ್.ಎಂ. ರಾಜು (ಮೋಹನ್ ರಾಜ್ ಎಂದೂ ಪರಿಚಿತರು) ಅವರು ಜುಲೈ 13ರ ಭಾನುವಾರ ನಾಗಪಟ್ಟಿಣಂನಲ್ಲಿ ನಿರ್ದೇಶಕ ಪಾ.ರಂಜಿತ್ ಅವರ ಬಹುನಿರೀಕ್ಷಿತ ಚಿತ್ರ ‘ವೇಟ್ಟುವಮ್’ನ ಚಿತ್ರೀಕರಣದ ವೇಳೆ ಸೆಟ್ ನಲ್ಲೇ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಈ ಆಘಾತಕಾರಿ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಲನಚಿತ್ರೋದ್ಯಮ ಮತ್ತು ಅಭಿಮಾನಿಗಳಲ್ಲಿ ತೀವ್ರ ಆಘಾತ ಉಂಟು ಮಾಡಿದೆ.
ಜುಲೈ 13ರಂದು ಬೆಳಗ್ಗೆ, ‘ವೇಟ್ಟುವಮ್’ ಚಿತ್ರಕ್ಕಾಗಿ ಅಪಾಯಕಾರಿ ಕಾರ್ ಟಾಪ್ಲಿಂಗ್ (ಕಾರನ್ನು ಉರುಳಿಸುವ) ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ವಿಡಿಯೊ ತುಣುಕುಗಳಲ್ಲಿ, 52 ವರ್ಷದ ರಾಜು ಅವರು ಎಸ್‌ಯುವಿ ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿರುವುದು ಕಾಣುತ್ತದೆ. ಕಾರು ಒಂದು ರ‍್ಯಾಂಪ್ ಮೇಲೆ ಹರಿದು ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಹಲವು ಬಾರಿ ತಿರುಗಿ ನಂತರ ಮುಂಭಾಗದಿಂದ ಅಪ್ಪಳಿಸಿದೆ. ಈ ಅಪಘಾತದಿಂದ ರಾಜು ಅವರ ಎದೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ನಾಗಪಟ್ಟಿಣಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಅಸುನೀಗಿರುವುದಾಗಿ ವೈದ್ಯರು ಘೋಷಿಸಿದರು.

ಅಪಘಾತವಾದ ಕೂಡಲೇ ಚಿತ್ರತಂಡದ ಸಿಬ್ಬಂದಿ ಧಾವಿಸಿ ಅವಘಡಕ್ಕೀಡಾದ ಕಾರಿನೊಳಗಿಂದ ರಾಜು ಅವರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಅದಾಗಲೀ ಪ್ರಾಣಾಂತಿಕವಾಗಿ ಗಾಯಗೊಂಡಿದ್ದ ಕಾರಣ ಯಾವುದೇ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಈ ದುರ್ಘಟನೆಯಿಂದ ಶೂಟಿಂಗ್ ಸ್ಥಳದಲ್ಲಿ ಶೋಕ ಮಡುಗಟ್ಟಿದ್ದು, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಎಸ್.ಎಂ. ರಾಜು: ದಶಕಗಳ ಅನುಭವಿ ಸ್ಟಂಟ್ ಮಾಸ್ಟರ್
ಕಾಂಚೀಪುರಂ ಜಿಲ್ಲೆಯ ಪೂಂಗಂಡಂ ಮೂಲದ ಎಸ್.ಎಂ. ರಾಜು ಅವರು ತಮಿಳು ಚಿತ್ರರಂಗದಲ್ಲಿ ದಶಕಗಳಿಂದ ಸೇವೆ ಸಲ್ಲಿಸಿದ ಅತ್ಯಂತ ಗೌರವಾನ್ವಿತ ಸ್ಟಂಟ್ ಕಲಾವಿದರಲ್ಲಿ ಒಬ್ಬರಾಗಿದ್ದರು. ತಮ್ಮ ಧೈರ್ಯಶಾಲಿ ಮತ್ತು ನಿಖರವಾದ ಸಾಹಸ ದೃಶ್ಯಗಳಿಗೆ ಹೆಸರುವಾಸಿಯಾಗಿದ್ದ ರಾಜು, ಹಲವು ದೊಡ್ಡ ಬಜೆಟ್ ಚಿತ್ರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದರು. ಅವರ ಕೌಶಲ್ಯ, ಸಮರ್ಪಣಾ ಭಾವ, ಬದ್ಧತೆ ಮತ್ತು ರಿಸ್ಕ್ ಗಳನ್ನು ಎದುರಿಸುವ ದಿಟ್ಟತನಕ್ಕಾಗಿ ಅವರು ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಿದ್ದರು. ತಮಿಳು ಚಿತ್ರರಂಗದ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿತ್ತು.
ಚಿತ್ರರಂಗದಿಂದ ಸಂತಾಪಗಳ ಮಹಾಪೂರ
ರಾಜು ಅವರ ನಿಧನಕ್ಕೆ ತಮಿಳು ಚಿತ್ರರಂಗದಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ರಾಜು ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ ನಟ ವಿಶಾಲ್ ಅವರು, ತಮ್ಮ ‘ಎಕ್ಸ್’ ಖಾತೆಯಲ್ಲಿ ಹೀಗೆ ಬರೆದಿದ್ದಾರೆ: “ಜಾಮೀ (@arya_offl) ಮತ್ತು @beemji ರಂಜಿತ್ ಅವರ ಚಿತ್ರದ ಕಾರ್ ಟಾಪ್ಲಿಂಗ್ ದೃಶ್ಯದಲ್ಲಿ ಸ್ಟಂಟ್ ಕಲಾವಿದ ರಾಜು ಮೃತಪಟ್ಟಿರುವುದನ್ನು ಒಪ್ಪಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ರಾಜು ಅವರನ್ನು ನಾನು ಹಲವು ವರ್ಷಗಳಿಂದ ಬಲ್ಲೆ, ಅವರು ನನ್ನ ಚಿತ್ರಗಳಲ್ಲಿ ಹಲವಾರು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ. ಅವರು ತುಂಬಾ ಧೈರ್ಯಶಾಲಿ ವ್ಯಕ್ತಿ. ಅವರ ಸಾವು ನಮ್ಮನ್ನು ದುಃಖದ ಮಡುವಿಗೆ ನೂಕಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದಿದ್ದಾರೆ. ಜೊತೆಗೆ ರಾಜು ಅವರ ಕುಟುಂಬಕ್ಕೆ ಜೀವನಪರ್ಯಂತ ಬೆಂಬಲ ನೀಡುವ ಭರವಸೆಯನ್ನೂ ವಿಶಾಲ್ ನೀಡಿದ್ದಾರೆ.
ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ ಸಿಲ್ವಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, “ನಮ್ಮ ಶ್ರೇಷ್ಠ ಕಾರ್ ಜಂಪಿಂಗ್ ಸ್ಟಂಟ್ ಕಲಾವಿದರಾದ ಎಸ್.ಎಂ. ರಾಜು ಇಂದು ಕಾರ್ ಸ್ಟಂಟ್ ಮಾಡುವಾಗ ಮೃತಪಟ್ಟಿದ್ದಾರೆ. ನಮ್ಮ ಸ್ಟಂಟ್ ಯೂನಿಯನ್ ಮತ್ತು ಭಾರತೀಯ ಚಿತ್ರರಂಗವು ಅವರನ್ನು ಕಳೆದುಕೊಂಡಿದೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
‘ವೇಟ್ಟುವಮ್’ ಚಿತ್ರದ ಬಗ್ಗೆ
‘ವೇಟ್ಟುವಮ್’ ಒಂದು ಗ್ಯಾಂಗ್‌ಸ್ಟರ್ ಡ್ರಾಮಾ ಆಗಿದ್ದು, ಪಾ. ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ಆರ್ಯ, ಶೋಭಿತಾ ಧುಲಿಪಾಲ, ಅಟ್ಟಕತಿ ದಿನೇಶ್, ಕಲೈಯರಸನ್ ಮತ್ತು ಲಿಂಗೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು 2021ರ ಯಶಸ್ವಿ ತಮಿಳು ಕ್ರೀಡಾ ಡ್ರಾಮಾ ‘ಸರ್ಪಟ್ಟ ಪರಂಬರೈ’ನ ಮುಂದುವರಿದ ಭಾಗ (ಸೀಕ್ವೆಲ್) ಎಂದು ಹೇಳಲಾದೆ. ‘ವೇಟ್ಟುವಮ್’ 2026 ರಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ. ನಿರ್ದೇಶಕ ಪಾ. ರಂಜಿತ್ ಮತ್ತು ನಾಯಕ ನಟ ಆರ್ಯ ಈ ಘಟನೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.



















