ಯಾದಗಿರಿ : ಮೇಕೆದಾಟು ಜಲಾಶಯ ಯೋಜನೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಜಲಾಶಯ ಯೋಜನೆ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಈಗಾಗಲೇ ಪೂರ್ಣಗೊಳಿಸಿದೆ. ಇದೀಗ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡ ಆರಂಭಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ನೀರು ನಮ್ಮ ಹಕ್ಕು ಸ್ಲೋಗನ್ ಕೊಟ್ಟು ಹೊರಟವರು ಯಾರು? ಮೇಕೆದಾಟು ಉಳಿಸುತ್ತೇವೆ ಎಂದು ಹೇಳಿದ ಮಹಾನ್ ಭಾವ ಡಿಸಿಎಂ ಅಲ್ವಾ? ಎಂದು ಟೀಕಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ ಇರುವವರು ಯಾರು? ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಯಾರ ಜೊತೆ ಚೆನ್ನಾಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಬನ್ನಿ ಸೌಹಾರ್ದಯುತವಾಗಿ ಕುಳಿತು ಮಾತನಾಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ನಮ್ಮ ನಾಡಿನ ನೀರಾವರಿ ವಿಚಾರವಾಗಿ ದೇವೇಗೌಡರಿಗೆ ಅಪಾರ ದೂರದೃಷ್ಟಿ ಇದೆ. ಹೀಗಾಗಿಯೇ ಹಲವಾರು ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಿರುವ ಉದಾಹರಣೆಗಳು ಇವೆ. ಮೇಕೆದಾಟು ಯೋಜನೆಗೆ ನಾವು ಕೈ ಜೋಡಿಸಲು ಸಿದ್ದರಿದ್ದೇವೆ. ಐದು ವರ್ಷ ಸಂಪೂರ್ಣ ಆದರೇ ಇರುತ್ತಾರೆ. ಹೀಗಾಗಿ ಅವರ ಅವಧಿಯಲ್ಲಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆ ವಾದ- ಪ್ರತಿವಾದಗಳಿಗೆ ಕಾರಣವಾಗಿತ್ತು. ಈ ವಿಷಯವಾಗಿಯೇ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.



















