ಅಹಮದಾಬಾದ್ ಭೀಕರ ವಿಮಾನ ದುರಂತದ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ದೊಡ್ಡ ಪ್ರಮಾದ ತಪ್ಪಿದೆ ಎನ್ನಲಾಗುತ್ತಿದೆ.

ಹೌದು, ಇಂದು ಮಧ್ಯಾಹ್ನ 1 ಗಂಟೆಗೆ ಅಹಮದಾಬಾದ್ ನಿಂದ ಲಂಡನ್ ಗೆ ತೆರಳಬೇಕಿದ್ದ ಎಐ 159 ವಿಮಾನ ದಿಢೀರ್ ರದ್ದಾಗಿದೆ. ಆರಂಭದಲ್ಲಿ ವಿಮಾನ ಸಂಚಾರ ತಡವಾಗಲಿದೆ ಎನ್ನಲಾಗಿತ್ತಾದರೂ ಅಂತಿಮವಾಗಿ ಇವತ್ತಿನ ಪ್ರಯಾಣವನ್ನೇ ರದ್ದು ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಏರಿಂಡಿಯಾ ಸಂಸ್ಥೆ ಇಲ್ಲಿಯವರೆಗೂ ಈ ಸಂಚಾರ ರದ್ದಾಗಿದ್ದಕ್ಕೆ ಸೂಕ್ತ ಕಾರಣವೇನು? ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಲಂಡನ್ ಗೆ ತೆರಳಲು ಅಣಿಯಾಗಿದ್ದ ಯಾತ್ರಿಗಳಿಗೆ, ವಿಮಾನ ರದ್ದಾಗಿದೆ ಎನ್ನುವ ಮಾಹಿತಿ ನೀಡಿ ಸುಮ್ಮನಾಗಿದೆ.

ಅಸಲಿಗೆ ಇಂದು ಲಂಡನ್ ಗೆ ತೆರಳಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸುಕೊಂಡಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ದೋಷವನ್ನು ಸರಿಪಡಿಸಲು ಸಕಲ ಪ್ರಯತ್ನ ನಡೆಯಿತಾದರೂ ಅಂತಿಮವಾಗಿ ಅದು ಫಲ ನೀಡಿಲ್ಲ. ಈ ಹಿನ್ನಲೆಯಲ್ಲೇ ಸಂಚಾರವನ್ನು ಅಂತಿಮ ಗಳಿಗೆಯಲ್ಲಿ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಇದೇ ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರಿಂಡಿಯಾ ವಿಮಾನ ಮೇಘಾನಿ ನಗರದ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಗೆ ಡಿಕ್ಕಿ ಹೊಡೆದು 274 ಮಂದಿಯನ್ನು ಬಲಿ ಪಡೆದಿತ್ತು. ಈ ದುರ್ಘಟನೆ ಮಾಸುವ ಮುನ್ನವೇ ಮತ್ತೆ ತಾಂತ್ರಿಕ ದೋಷ ವರದಿಯಾಗಿರೋದು ಏರಿಂಡಿಯಾ ಪ್ರಯಾಣಿಕರ ಆತಂಕ ಹೆಚ್ಚಿಸಿದೆ.