ಬೆಂಗಳೂರು: ರಾಜ್ಯದಲ್ಲಿ (Karnataka) ಪ್ರಸ್ತಕ ವರ್ಷದಿಂದ ನೈತಿಕ ಶಿಕ್ಷಣ ಜಾರಿಗೆಗೆ ಶಿಕ್ಷಣ ಇಲಾಖೆ (Karnataka Education Department) ಮುಂದಾಗಿದೆ. ಆದರೆ, ಹಿಂದೂ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ವಿದ್ಯಾರ್ಥಿಗಳ ವೈಯೋಮಾನಕ್ಕೆ ತಕ್ಕಂತೆ DSERTಯಿಂದ ಲೈಂಗಿಕ ಶಿಕ್ಷಣ (sexual education) ಪಠ್ಯ ಸಿದ್ಧ ಮಾಡಲಾಗಿದ್ದು, ಪ್ರಾರಂಭಿಕ ಹಂತದಲ್ಲಿ 8 ರಿಂದ 12 ನೇ ತರಗತಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
DSERT ವಯೋಮಿತಿ ಅನುಗುಣವಾಗಿ ನೈತಿಕ ಪಠ್ಯದಡಿ ಲೈಂಗಿಕ ಪಠ್ಯ ಪರಿಚಯಿಸಲು ಮುಂದಾಗಿದೆ. ವಯೋಮಿತಿಗೆ ತಕ್ಕಂತೆ ನೈತಿಕ ಪಠ್ಯ ಏನಿರಬೇಕು? ಹೇಗೆ ಪಾಠ ಮಾಡಬೇಕು ಎಂಬ ಕುರಿತು DSERT ಪ್ರತ್ಯೇಕ ಪಠ್ಯ ನೀಡಲು ಮುಂದಾಗಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಲು ಈ ಕ್ರಮಕ್ಕೆ ಮುಂದಾಗಿದ್ದು, ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಮೂಲಕ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ತಿಳವಳಿಕೆ ನೀಡಲು ಮುಂದಾಗಿದೆ.
ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ಅವುಗಳೆಲ್ಲವನ್ನೂ ಸಹಜ ರೀತಿಯಲ್ಲಿ ನಿರ್ವಹಿಸಿಕೊಂಡು ಬದುಕು ಸಾಗಿಸುವ ಕುರಿತು ತಿಳುವಳಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.