ವಾಷಿಂಗ್ಟನ್: ಬೆಳೆಗಳನ್ನು ನಾಶ ಮಾಡುವಂಥ ಅತ್ಯಂತ ಅಪಾಯಕಾರಿ ಫಂಗಸ್ ಅನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಚೀನಾದ ಇಬ್ಬರು ನಾಗರಿಕರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಯುಂಕಿಂಗ್ ಜಿಯಾನ್ (33) ಮತ್ತು ಝುನ್ಯಾಂಗ್ ಲಿಯು(34) ಬಂಧಿತರು. ಇವರಿಬ್ಬರೂ ಚೀನಾದ ನಾಗರಿಕರಾಗಿದ್ದು, ಅಮೆರಿಕಕ್ಕೆ ಅಪಾಯಕಾರಿ ರೋಗಕಾರಕವನ್ನು ಕಳ್ಳಸಾಗಣೆ ತಂದಿರುವ ಆರೋಪ, ಸಂಚು, ಸುಳ್ಳು ಹೇಳಿಕೆ ನೀಡಿರುವುದು ಮತ್ತು ವೀಸಾ ವಂಚನೆ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ ಎಂದು ಅಮೆರಿಕದ ಪೂರ್ವ ಮಿಚಿಗನ್ ಜಿಲ್ಲೆಯ ಅಟಾರ್ನಿ ಕಚೇರಿ ತಿಳಿಸಿದೆ.
ಜಿಯಾನ್ ಮತ್ತು ಲಿಯು ಅವರು ಅಕ್ರಮವಾಗಿ ಫುಸೇರಿಯಮ್ ಗ್ರ್ಯಾಮಿನಿಯರಮ್ ಎಂಬ ಫಂಗಸ್ ಅನ್ನು ಅಮೆರಿಕಕ್ಕೆ ತಂದಿದ್ದಾರೆ. ಈ ಫಂಗಸ್ ಅತ್ಯಂತ ಅಪಾಯಕಾರಿಯಾಗಿದ್ದು ಗೋದಿ, ಬಾರ್ಲಿ, ಜೋಳ ಮತ್ತು ಅಕ್ಕಿಯಂಥ ಬೆಳೆಗಳನ್ನು ನಾಶಮಾಡುವಂಥ ರೋಗ ತರಿಸುವಂಥದ್ದು ಎಂದು ಫೆಡರಲ್ ಪ್ರಾಸಿಕ್ಯೂಟರ್ ಗಳು ಹೇಳಿದ್ದಾರೆ.
ಈ ರೋಗಕಾರಕವು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿಗೆ ಕಾರಣವಾಗಿದ್ದು, ಮನುಷ್ಯರು ಹಾಗೂ ಜಾನುವಾರುಗಳಿಗೂ ಹಾನಿ ಉಂಟುಮಾಡುವಂಥ ಮೈಕೋಟಾಕ್ಸಿನ್ಸ್ ಗಳನ್ನೂ ಅದು ಉತ್ಪತ್ತಿ ಮಾಡುತ್ತದೆ.
ಈ ಪ್ರಕರಣವು ಜಾಗತಿಕ ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಫಂಗಸ್‌ಗೆ ಸಂಬಂಧಿಸಿದ್ದಾಗಿದೆ ಎಂದು ಅಟಾರ್ನಿ ಜೆರೋಮ್ ಎಫ್. ಜಾರ್ಗನ್ ಹೇಳಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆಯೊಂದಕ್ಕೆ ಇದನ್ನು ಕಳ್ಳಸಾಗಣೆ ಮಾಡಿರುವುದು ರಾಷ್ಟ್ರೀಯ ಭದ್ರತೆಗೆ ಕಳವಳಕಾರಿ ವಿಚಾರವಾಗಿದೆ ಎಂದೂ ಹೇಳಿದ್ದಾರೆ.
ಮಿಚಿಗನ್ ಯುನಿವರ್ಸಿಟಿಯ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ಜಿಯಾನ್ , ಸಂಶೋಧನೆಯಲ್ಲಿ ಬಳಸಲೆಂದು ಈ ಫಂಗಸ್ ಅನ್ನು ಕಳ್ಳಸಾಗಣೆ ಮಾಡಿರುವ ಸಾಧ್ಯತೆ ಇದೆ. ಈಕೆಗೆ ಚೀನಾ ಸರ್ಕಾರವೇ ಹಣಕಾಸಿನ ನೆರವು ನೀಡಿರಬಹುದು ಎಂದೂ ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಈಕೆಯ ಬಾಯ್ ಫ್ರೆಂಡ್ ಲಿಯು ಚೀನಾದ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನೂ ರೋಗಕಾರಕಗಳ ಸಂಶೋಧನೆಯಲ್ಲಿ ತೊಡಗಿದವನು ಎನ್ನಲಾಗಿದೆ. ಆರಂಭಿಕ ವಿಚಾರಣೆ ವೇಳೆ ಇದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೇಳಿದ್ದ ಲಿಯು, ನಂತರ ಅಮೆರಿಕಕ್ಕೆ ಫಂಗಸ್ ತಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ.