ನವದೆಹಲಿ: ದೇಶದ ಯಾವುದೇ ಕಂಪನಿಗಳಲ್ಲಿ ಅಪ್ರೆಂಟಿಸ್ ಶಿಪ್ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಪಂಡ್ ಮೊತ್ತದಲ್ಲಿ ಶೇ.36ರಷ್ಟು ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನ್ಯಾಷನಲ್ ಅಪ್ರೆಂಟಿಸ್ ಶಿಪ್ ಪ್ರಮೋಷನ್ ಸ್ಕೀಮ್ (ಎನ್ ಎ ಪಿ ಎಸ್) ಹಾಗೂ ನ್ಯಾಷನಲ್ ಅಪ್ರೆಂಟಿಸ್ ಶಿಪ್ ಟ್ರೈನಿಂಗ್ ಸ್ಕೀಮ್ (ಎನ್ ಎ ಟಿ ಎಸ್) ಯೋಜನೆಗಳ ಅಡಿಯಲ್ಲಿ ಸ್ಟೈಪೆಂಡ್ ಹೆಚ್ಚಿಸುವ ಕುರಿತು ಕೇಂದ್ರೀಯ ಅಪ್ರೆಂಟಿಸ್ ಶಿಪ್ ಸಮಿತಿ ಸಭೆಯು ಶಿಫಾರಸು ಮಾಡಿದೆ.
ಕೇಂದ್ರ ಅಪ್ರೆಂಟಿಸ್ಶಿಪ್ ಮಂಡಳಿಯ (CAC) 38 ನೇ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಚಿವ ಜಯಂತ್ ಚೌಧರಿ ಅವರು ಶೇ.36ರಷ್ಟು ಸ್ಟೈಪೆಂಡ್ ಮೊತ್ತ ಹೆಚ್ಚಿಸುವ ಕುರಿತು ಶಿಫಾರಸು ಮಾಡಿದರು. ಇದಕ್ಕೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದಾಗಿ ದೇಶದ ಲಕ್ಷಾಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
ಈಗ ವಿದ್ಯಾರ್ಥಿಗಳು 5,000 ರಿಂದ 9,000 ರೂ.ವರೆಗೆ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಸಮಿತಿಯ ಶಿಫಾರಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ವಿದ್ಯಾರ್ಥಿಗಳು 6,800 ರಿಂದ 12,300 ರೂ.ವರೆಗೆ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. ಇದರರ್ಥ ಯುವಕರು ಪ್ರತಿ ತಿಂಗಳು ನೇರವಾಗಿ ಹೆಚ್ಚಿನ ಹಣವನ್ನು ಪಡೆಯುತ್ತಾರೆ, ಇದರಿಂದಾಗಿ ಅವರು ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ. ಪೋಷಕರಿಗೂ ಇದರಿಂದ ಹೊರೆಯಾಗುವುದಿಲ್ಲ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಪೋರ್ಟಲ್ನಲ್ಲಿ (NATS, NAPS) ಕಾಲಕಾಲಕ್ಕೆ ಹೊಸ ಅಪ್ರೆಂಟಿಸ್ ಶಿಪ್ ಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು nats.education.gov.in ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಇದಲ್ಲದೆ, ರೈಲ್ವೇ, ಬಿ ಎಚ್ ಇ ಎಲ್, ಒ ಎನ್ ಜಿ ಸಿ, ಎಸ್ ಎ ಐ ಎಲ್, ಎನ್ ಟಿ ಪಿ ಸಿ, ಡಿ ಆರ್ ಡಿ ಒ, ಇಸ್ರೋ, ಎಚ್ ಎ ಎಲ್, ಬಿ ಇ ಎಲ್ ನಂತಹ ಸರ್ಕಾರಿ ಕಂಪನಿಗಳು ಕೂಡ ಅಪ್ರೆಂಟಿಸ್ಶಿಪ್ ಫಾರ್ಮ್ಗಳನ್ನು ಬಿಡುಗಡೆ ಮಾಡುತ್ತವೆ. ಖಾಸಗಿ ಕಂಪನಿಗಳು ಕೂಡ ಅಪ್ರೆಂಟಿಸ್ ಶಿಪ್ ಗೆ ಆಹ್ವಾನ ನೀಡುತ್ತವೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.