ತಮಿಳಿನಿಂದ ಕನ್ನಡ ಎನ್ನುವ ಉದ್ಧಟತನದ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕರವೇ ಖಡಕ್ ಎಚ್ಚರಿಕೆ ನೀಡಿದೆ.

ಕಮಲ್ ಹಾಸನ್ ರನ್ನು ಕನ್ನಡ ಸಿನಿಮಾಗಳಿಗೆ ಬ್ಯಾನ್ ಮಾಡಬೇಕು ಎಂದು ಕರವೇ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್ ರಿಲೀಸ್ ಬಗ್ಗೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಸಲಾಯಿತು. ಇದೇ ವೇಳೆ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾಗರು ಸಭೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಫಿಲ್ಮ್ ಚೇಂಬರ್ ಗೆ ನುಗ್ಗಿ ಪ್ರತಿಭಟಿಸಿದ ಕರವೇ ಹೋರಾಟಗಾರರು, ನಟ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಕನ್ನಡಕ್ಕಾಗಿ ಸಾಯುತ್ತೇನೆ ಎಂಬ ಶಿವಣ್ಣ ಹೇಳಿಕೆಯನ್ನು ಖಂಡಿಸಿದ್ದಾರೆ. ಶಿವಣ್ಣ ಅವರು ಕನ್ನಡಕ್ಕಾಗಿ ಸಾಯುತ್ತೇನೆ ಅಂತಾ ಹೇಳೋದು ಬೇಕಾಗಿಲ್ಲ. ಮೊದಲು ಕಮಲ್ ಹಾಸನ್ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕಿತ್ತು. ಕನ್ನಡ ಪರ ಸಂಘಟನೆಗಳಿಗೆ ಯಾರೂ ಬುದ್ಧಿ ಹೇಳಬೇಕಾಗಿಲ್ಲ. ಮೊದಲು ಎಲ್ಲರೂ ಭಾಷೆಗೆ ಗೌರವ ಕೊಡಬೇಕು. ಭಾಷೆಗೆ ಆದ ಅವಮಾನವನ್ನು ಖಂಡಿಸೋಣ ಎಂದು ತಿಳಿಸಿದ್ದಾರೆ.
ಡಾ. ರಾಜಕುಮಾರ್ ಅವರಿಗೆ ಇರುವ ಕನ್ನಡ ಪ್ರೇಮ ಶಿವಣ್ಣನಿಗೆ ಬರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಈ ವಿಚಾರ ಆಮೇಲೆ ಮಾತನಾಡುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳುವವರೆಗೂ ಕಮಲ್ ಹಾಸನ್ ಚಿತ್ರ ಬಿಡುಗಡೆಯಾಬಾರದು. ಒಂದು ವೇಳೆ ಸಿನಿಮಾ ಬಿಡುಗಡೆಯಾದರೆ, ಚಿತ್ರಮಂದಿರಗಳನ್ನು ಹೊಡೆದು ಹಾಕ್ತೀವಿ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕರ್ನಾಟಕ ರಕ್ಷಣೆ ವೇದಿಕೆಯ ಬೆಂಗಳೂರು ಅಧ್ಯಕ್ಷ ಧರ್ಮಣ್ಣ, ಅವನು ಕಮಲ್ ಹಾಸನ್ ಅಲ್ಲ ಕಮಂಗಿ ಹಾಸನ್. ಕನ್ನಡ ವಿರೋಧಿ ಕೇಳಿಕೆ ಕೊಟ್ಟು ತಮಿಳುನಾಡಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾನೆ. ಈತ ತಿರುಕನ ಕನಸು ಕಾಣುತ್ತಿದ್ದಾನೆ. ಕಮಲ್ ಸಿನಿಮಾ ರಿಲೀಸ್ ಆದರೆ ಚಿತ್ರಮಂದಿರಗಳನ್ನು ಹೊಡೆದು ಹಾಕ್ತೀವಿ . ಹೀಗಾಗಿ ವಾಣಿಜ್ಯ ಮಂಡಳಿ ಸಹ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುಬೇಕು ಎಂದರು.
ನಮ್ಮ ಕನ್ನಡ ನಾಡು ರಾಜಕುಮಾರ್ ಅವರ ಹುಟ್ಟಿದ ನಾಡು. ಆದರೆ, ಅವರ ಮಗ ಶಿವರಾಜ್‌ಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರಿಗೆ ಬದುಕು ಕೊಟ್ಟಿದ್ದು ಕರ್ನಾಟಕ. ಆದರೆ, ಅವರು ಕನ್ನಡದ ಪರವಾಗಿಲ್ಲ. ಕನ್ನಡ ಚಿತ್ರರಂಗದ ನಟರು ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ನಾಡು ಹಾಗೂ ಭಾಷೆಯ ವಿಚಾರದಲ್ಲಿ ಜೊತೆ ನಿಲ್ಲಿ ಎಂದು ಮನವಿ ಮಾಡಿದರು.
ಫಿಲ್ಮ್ ಛೇಂಬರ್ ಸಭೆಯಲ್ಲಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕ ಸಂಘ, ಥಾಮಸ್ ಡಿಸೋಜಾ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು.



















