ರಾಮನಗರ: ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಶ್ರೀನಿವಾಸಗೌಡ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್ ಎಸ್ ಎಲ್ ವರದಿಯಲ್ಲಿ ಅತ್ಯಾಚಾರ ನಡೆದಿರುವುದು ಕಂಡು ಬಂದಿಲ್ಲ. ಬಾಲಕಿಯ ಕುಟುಂಬಸ್ಥರು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ, ಪ್ರಕರಣದಲ್ಲಿ ಅವರ ಪಾತ್ರ ಕಂಡು ಬಂದಿಲ್ಲ. ಎಫ್ ಎಸ್ ಎಲ್ ವರದಿಯ ನಂತರ ಅತ್ಯಾಚಾರ ನಡೆದಿಲ್ಲ ಎನ್ನುವುದು ದೃಢಪಟ್ಟಿದೆ.
ವರದಿಯಲ್ಲಿ ಯಾವುದೇ ರೀತಿಯ ಅತ್ಯಾಚಾರ ನಡೆದಿಲ್ಲ ಎಂದು ಬಂದಿದೆ. ಮೃತ ಬಾಲಕಿಗೆ ಹೆಡ್ ಇಂಜುರಿ ಹಾಗೂ ಮೈಮೇಲೆ ಗಾಯಗಳಾಗಿವೆ. ಸದ್ಯ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರಬೇಕಿದೆ. ಆ ವರದಿಯ ನಂತರ ಸ್ಪಷ್ಟ ವಿಷಯ ಹೊರ ಬೀಳಲಿದೆ ಎಂದಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ಕುರಿತು ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಅತ್ಯಾಚಾರ ಎಸಗಿದ್ದಾರೆ. ಮೈಮೇಲೆ ಸಿಗರೇಟ್ ನಿಂದ ಸುಟ್ಟಗಾಯಗಳಾಗಿವೆ ಅಂತೆಲ್ಲ ಹೇಳಲಾಗುತ್ತಿದೆ. ಆದರೆ, ಆ ರೀತಿಯ ಯಾವುದೇ ಗಾಯಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಈ ರೀತಿಯ ಸುಳ್ಳು ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ರೈಲ್ವೆ ಪೊಲೀಸರು ತನಿಖೆ ಮಾಡಬೇಕಾಗುತ್ತದೆ. ಆದರೆ, ಪೊಲೀಸರು ಸ್ಥಳಕ್ಕೆ ಹೋಗುವುದಕ್ಕೂ ಮುನ್ನ ಅತ್ಯಾಚಾರ ನಡೆದಿದೆ ಎಂದು ಹಬ್ಬಿಸಲಾಗಿತ್ತು. ತಪ್ಪು ಸಂದೇಶ ಹೋಗಬಾರದು. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದಿದ್ದಾರೆ


















