ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ಷಿಪಣಿಗಳ ಮಳೆಗಳು ಸುರಿಯುತ್ತಿರುವಂತೆಯೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ. ದೇಶಾದ್ಯಂತ ಎಟಿಎಂಗಳನ್ನು 2-3 ದಿನಗಳ ಕಾಲ ಮುಚ್ಚಲಾಗುವುದು ಎಂಬ ಸುದ್ದಿಯೊಂದು ವಾಟ್ಸ್ಆಪ್ಗಳಲ್ಲಿ ಭಾರೀ ಪ್ರಮಾಣದಲ್ಲಿ(Viral News) ಹಂಚಿಕೆಯಾಗುತ್ತಿದೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಟ್ವೀಟರ್ನಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಮಾಡಿರುವ ಮಾಹಿತಿ ಹಂಚಿಕೊಂಡಿದ್ದು, ಎಟಿಎಂ ಮುಚ್ಚಲಾಗುತ್ತದೆ ಎಂಬ ಸಂದೇಶವು “ನಕಲಿ” ಎಂದು ಹೇಳಿದೆ. ಅಲ್ಲದೇ “ದೇಶಾದ್ಯಂತ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ” ಎಂದು ಸಾರ್ವಜನಿಕರಿಗೆ ತಿಳಿಸಿದೆ.
ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರಂ ಆಗಿರುವ ವಾಟ್ಸ್ಆಪ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ದಾರಿತಪ್ಪಿಸುವ ಸಂದೇಶವು ಹಲವು ಬಳಕೆದಾರರಲ್ಲಿ ನಗದು ಕೊರತೆಯ ಬಗ್ಗೆ ಕಳವಳವನ್ನುಂಟು ಮಾಡಿತ್ತು. ಯುವಜನತೆ ಫೋನ್ ಪೇ, ಗೂಗಲ್ ಪೇಯಂತಹ ಪಾವತಿ ಆಪ್ ಗಳನ್ನು ಬಳಸುತ್ತಾರೆ. ಆದರೆ ಹಿರಿಯ ನಾಗರಿಕರು ಹಾಗೂ ಹಳ್ಳಿಗಾಡಿನ ಜನರು ಈಗಲೂ ಎಟಿಎಂಗಳ ನಗದನ್ನೇ ಆಶ್ರಯಿಸಿದ್ದಾರೆ. ಹೀಗಾಗಿ, ಎರಡು-ಮೂರು ದಿನ ಎಟಿಎಂನಲ್ಲಿ ನಗದು ಲಭ್ಯವಿರುವುದಿಲ್ಲ ಎಂಬ ಸುದ್ದಿಯು ಸಹಜವಾಗಿಯೇ ಅವರನ್ನು ಆತಂಕಕ್ಕೆ ನೂಕಿತ್ತು. ಈ ಹಿನ್ನೆಲೆಯಲ್ಲಿ ಈ ಸುಳ್ಳು ಸುದ್ದಿಯನ್ನು ಭೇದಿಸಿರುವ ಪಿಐಬಿ, ಈ ಮಾಹಿತಿಯನ್ನು ನಿರ್ಲಕ್ಷಿಸುವಂತೆ ಮತ್ತು ಅಂತಹ ಪರಿಶೀಲಿಸದ ಸಂದೇಶಗಳನ್ನು ಮತ್ತಷ್ಟು ಹಂಚಿಕೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಿದೆ.
“ಎಟಿಎಂಗಳನ್ನು 2-3 ದಿನಗಳವರೆಗೆ ಮುಚ್ಚಲಾಗುವುದು ಎಂದು ವೈರಲ್ #WhatsApp ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶ ನಕಲಿ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಪರಿಶೀಲಿಸದ ಸಂದೇಶಗಳನ್ನು ಹಂಚಿಕೊಳ್ಳಬೇಡಿ” ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ (@PIBFactCheck) ಪೋಸ್ಟ್ ಮಾಡಿದೆ.
ಸರ್ಕಾರದ ಅಧಿಕೃತ ಸತ್ಯಶೋಧನಾ ಸಂಸ್ಥೆಯ ಈ ಸ್ಪಷ್ಟೀಕರಣವು ಯಾವುದೇ ಅನಗತ್ಯ ಭೀತಿಯನ್ನು ಶಮನಗೊಳಿಸುವ ಮತ್ತು ಎಟಿಎಂ ಸೇವೆಗಳು ತಡೆರಹಿತವಾಗಿ ಉಳಿಯುತ್ತವೆ ಎಂದು ಸಾರ್ವಜನಿಕರಿಗೆ ಖಚಿತಪಡಿಸುವ ಗುರಿಯನ್ನು ಹೊಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಪರಿಶೀಲಿಸದ ಮಾಹಿತಿಯ ಬಗ್ಗೆ ಜನರು ಜಾಗರೂಕರಾಗಿರಬೇಕು ಮತ್ತು ನಿಖರವಾದ ಸುದ್ದಿಗಳಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಬೇಕು ಎಂದೂ ಪಿಐಬಿ ಸಾರ್ವಜನಿಕರಿಗೆ ತಿಳಿಸಿದೆ.