ಬೀಜಿಂಗ್: ಭಾರತೀಯರಿಗೆ ಚಿನ್ನದ ಮೇಲೆ ವ್ಯಾಮೋಹ ಜಾಸ್ತಿ. ಶುಭ ಸಮಾರಂಭ ಸೇರಿ ಹಲವು ವೇಳೆ ಮಹಿಳೆಯರನ್ನು ಚಿನ್ನವನ್ನು ಖರೀದಿಸುತ್ತಾರೆ. ಹಾಗೆಯೇ, ಇದು ಹೂಡಿಕೆಯ ಸಾಧನವೂ ಆಗಿದೆ. ತುರ್ತು ಸಂದರ್ಭದಲ್ಲಿ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ಮಾರಾಟ ಮಾಡಬೇಕು ಎಂದರೆ ದೇಶದಲ್ಲಿ ದಿನಗಟ್ಟಲೆ ಕಾಯಬೇಕು. ಆದರೆ, ಚೀನಾದಲ್ಲೊಂದು ಗೋಲ್ಡ್ ಎಟಿಎಂ ತಯಾರಿಸಲಾಗಿದ್ದು, ನಿಂತ ಜಾಗದಲ್ಲೇ ಜನರ ಚಿನ್ನವನ್ನು ಕರಗಿಸಿ, ಅದರ ಶುದ್ಧತೆ ಅಳತೆ ಮಾಡಿ, ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತದೆ.
ಸ್ಮಾರ್ಟ್ ಗೋಲ್ಡ್ ಎಟಿಎಂ ಯಂತ್ರವು ಆಧುನಿಕ ತಂತ್ರಜ್ಞಾನ ಬಳಸಿ ಚಿನ್ನದ ಆಭರಣದ ಶುದ್ಧತೆ ಎಷ್ಟಿದೆ ಮತ್ತು ಎಷ್ಟು ತೂಕ ಇದೆ ಎಂದು ತಕ್ಷಣವೇ ಪರೀಕ್ಷಿಸುತ್ತದೆ. ಪರೀಕ್ಷೆ ಮುಗಿದ ಮೇಲೆ, ಹೆಚ್ಚಿನ ಭದ್ರತೆಗಾಗಿ ಚಿನ್ನವನ್ನು ಎಟಿಎಂನಲ್ಲೇ ಕರಗಿಸುತ್ತಾರೆ. ನಿಮ್ಮ ಚಿನ್ನವು ಯಂತ್ರದ ನಿಯಮಗಳ ಪ್ರಕಾರ ಇದ್ದರೆ ಅಂದರೆ ಕನಿಷ್ಠ ಶೇ.50ರಷ್ಟು ಶುದ್ಧತೆಯೊಂದಿಗೆ ಮೂರು ಗ್ರಾಂಗಳಿಗಿಂತ ಹೆಚ್ಚು ತೂಕದ ಚಿನ್ನದ ವಸ್ತು ಇದ್ದರೆ ಶುದ್ದತೆ ಪರಿಶೀಲಿಸಿ ನಿಮಗೆ ಬೆಲೆ ತಿಳಿಸುತ್ತದೆ.
ಎಟಿಎಂ ಒಳಗೆ ಹಾಕಿದಂತಹ ಚಿನ್ನವನ್ನು 1,200 ಡಿಗ್ರಿಯಲ್ಲಿ ಈ ಯಂತ್ರ ಕರಗಿಸುತ್ತದೆ. ನಿಮಗೆ ಒಪ್ಪಿಗೆ ಇದ್ದರೆ ಎಲ್ಲಾ ಪ್ರೋಸೀಜರ್ ಮುಗಿಸಿ, ಹಣವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಒಟ್ಟಾರೆ 30 ನಿಮಿಷಗಳಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಚಿನ್ನವನ್ನು ಸ್ವೀಕರಿಸಿ ನಿಮಗೆ ನೇರ ಪಾವತಿ ಮಾಡುತ್ತದೆ.
ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಿಂತ ಕೊಂಚ ಕಡಿಮೆ ದರದಲ್ಲಿ ಚಿನ್ನ ಖರೀದಿಸಿದ್ರೂ ಸುಲಭವಾಗಿ ಚಿನ್ನ ಮಾರಾಟ ಮಾಡಬಹುದಾದ ಕಾರಣ ಗ್ರಾಹಕರು ಇದರತ್ತ ಮುಗಿಬೀಳುತ್ತಿದ್ದಾರೆ. ಚೀನಾ ಟೈಮ್ಸ್.ಕಾಮ್ ಪ್ರಕಾರ, ಮೇ ತಿಂಗಳವರೆಗೆ ಯಂತ್ರವನ್ನು ಬಳಸಲು ಅಪಾಯಿಂಟ್ ಮೆಂಟ್ ಗಳು ತುಂಬಿಹೋಗಿದ್ದುಇದರಿಂದ ಈ ಯಂತ್ರಕ್ಕೆ ಎಷ್ಟೊಂದು ಬೇಡಿಕೆ ಇದೆ ಎಂದು ತಿಳಿಯುತ್ತದೆ.


















