ಬೆಂಗಳೂರು: ನಮ್ಮ ಮೆಟ್ರೋ ಅಧಿಕಾರಿಗಳ ಅವಾಂತರದಿಂದಾಗಿ ಆಟೋ ಚಾಲಕ ಸಾವನ್ನಪ್ಪಿದ್ದು, ಈಗ ಮೃತ ಖಾಸೀಂ ಪುತ್ರ ಮೊಹಮ್ಮದ್ ಆಸೀಫ್ ಮಾತನಾಡಿದ್ದಾರೆ.
ನಮ್ಮ ತಂದೆಗೆ ತುಂಬಾ ಸಾಲ ಇತ್ತು. ನಿನ್ನೆ ರಾತ್ರಿ ಕಾಲ್ ಮಾಡಿ, ಬೆಳಿಗ್ಗೆ ಬೇಗ ಬರುತ್ತೇನೆ ಅಂತಾ ಹೇಳಿದ್ದರು. ಆದರೆ, ಈಗ ಅವರು ಇಲ್ಲ. ಇದೇ ಹೇಗಾಯ್ತೋ ಗೊತ್ತಿಲ್ಲ. ನಾವು ಅವರಿಲ್ಲದೇ ಏನು ಮಾಡಬೇಕು? ಮೆಟ್ರೋದವರು ಸುರಕ್ಷತೆ ನೋಡಿಕೊಳ್ಳಬೇಕಿತ್ತು. ಸುರಕ್ಷತೆ ನೋಡಿಕೊಂಡಿದ್ದರೆ ನಮ್ಮ ತಂದೆ ಬದುಕುತ್ತಿದ್ದರು ಎಂದು ಬಿಎಂಆರ್ ಸಿಎಲ್ ವಿರುದ್ಧ ಮೃತ ಖಾಸೀಂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಶಿಫ್ಟ್ ಮಾಡುವಾಗ ತುಂಬಾ ಸೆಕ್ಯೂರಿಟಿ ಇರುತ್ತದೆ. ಮುಂದೆ ಇಬ್ಬರು, ಹಿಂದೆ ಇಬ್ಬರು ಇರುತ್ತಾರೆ. ಆದರೆ, ಇಲ್ಲಿ ಯಾರೂ ಇರಲಿಲ್ಲ. ಯಾರಾದರು ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇಡೀ ಕುಟುಂಬವೇ ಅವರ ಮೇಲೆ ಡಿಪೆಂಡ್ ಆಗಿತ್ತು. ಈಗ ನಮ್ಮನ್ನು ಯಾರು ಸಾಕುತ್ತಾರೆ? ಮೃತ ಖಾಸೀಂ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.



















