ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿರುವ ಮೇಹುಲ್ ಚೋಕ್ಸಿ ಮುಂಬೈನ ಈ ನಿವಾಸಿಗಳಿಗೆ ನಿಜಕ್ಕೂ ತಲೆನೋವಾಗಿದ್ದಾನೆ.
ಹೌದು ಅಚ್ಚರಿಯಾದರು ಇದು ಸತ್ಯ, ಚೋಕ್ಸಿಯಿಂದಾಗಿ ಈ ಅಪಾರ್ಟ್ ಮೆಂಟ್ ನಿವಾಸಿಗಳು 30ರಿಂದ 35 ಲಕ್ಷ ರೂ. ಖರ್ಚು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅನುಭವಿಸಿದ್ದಾರೆ. ಮುಂಬೈನ ಪ್ರತಿಷ್ಠಿತ ಮಲಬಾರ್ ಹಿಲ್ಸ್ ನಲ್ಲಿರುವ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಮೇಹುಲ್ ಚೌಕ್ಸಿಗೆ ಸೇರಿದ ಮೂರು ಫ್ಲ್ಯಾಟ್ ಗಳಿವೆ.
ಪಿಎನ್ ಬಿ ಹಗರಣದ ಬೆನ್ನಲ್ಲೇ ದೇಶ ತೊರೆದ ಕುಟುಂಬ ಸದ್ಯಕ್ಕೆ ಆ ಮನೆಗಳಲ್ಲಿ ವಾಸವಿಲ್ಲ. ಇನ್ನು ಈ ಖಾಲಿ ಮನೆಗಳು ಸ್ವಚ್ಛತೆಯಿಲ್ಲದೆ ಗಬ್ಬೆದ್ದು ಹೋಗಿವೆ. ಇನ್ನು ಮನೆಯಲ್ಲಿದ್ದ ಶೋ ಗಿಡಗಳು ಬೇರು ಬಿಟ್ಟು ಅಕ್ಕಪಕ್ಕದ ಮನೆಗಳಿಗೂ ನುಗ್ಗಿವೆ. ಕೆಲವರ ಮನೆ ತಾರಸಿ ಈ ಗಿಡಗಳಿಂದಾಗಿ ಸೋರುವುದಕ್ಕೂ ಶುರು ಮಾಡಿವೆ. ಪರಿಣಾಮ 30ರಿಂದ 35 ಲಕ್ಷ ರೂ. ಖರ್ಚು ಮಾಡಿ ಮನೆ ರಿಪೇರಿ ಮಾಡಿಸಿಕೊಂಡಿದ್ದಾರೆ.
ಸಾಲದ್ದಕ್ಕೆ ಕಳೆದ 7 ವರ್ಷಗಳಿಂದ ಈ ಫ್ಲ್ಯಾಟ್ ಗಳ ಮೆಂಟೇನೆನ್ಸ್ ಕೂಡ ಪಾವತಿಸಿಲ್ಲ. ಈ ಮೊತ್ತವೇ 63 ಲಕ್ಷ ದಾಟಿದೆ, ಇನ್ನು ಇದಕ್ಕೆ ನೆರೆ ಹೊರೆಯವರ ರಿಪೇರಿ ಕೆಲಸದ ಬಾಬ್ತು ಸೇರಿಸಿದರೆ 95 ಲಕ್ಷ ದಾಟುತ್ತೆ ಅಂತಿದೆ ಸೊಸೈಟಿ ಆಡಳಿತ ಮಂಡಳಿ. ಚೋಕ್ಸಿಗೆ ಈ ಅಪಾರ್ಟ್ ಮೆಂಟ್ ನ 9, 10, 11ನೇ ಮಹಡಿಯಲ್ಲಿ ಪ್ಲ್ಯಾಟ್ ಗಳಿವೆ. ಅಷ್ಟೇ ಅಲ್ಲಾ ಅಪಾರ್ಟ್ ಮೆಂಟ್ ನ ತಾರಸಿಯನ್ನೂ ಈ ಕುಟುಂಬವೇ ಅತಿಕ್ರಮಿಸಿಕೊಂಡಿದೆ ಅಂತಲೂ ಆಡಳಿತ ಮಂಡಳಿ ಆರೋಪಿಸಿದೆ.


















