ಬೆಂಗಳೂರು : ನಿಸ್ಸಾನ್ ಮೋಟಾರ್ ಇಂಡಿಯಾ ಹೊಸತಾಗಿ 7 ಆಸನಗಳ ಬಿ-ಎಂಪಿವಿ ಅನ್ನು ಶೀಘ್ರವೇ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದೆ. ಇದರ ಬಳಿಕ 5 ಆಸನಗಳ ಸಿ-ಎಸ್‌ಯುವಿ ಬಿಡುಗಡೆಯಾಗಲಿದ್ದು, ಒಟ್ಟಾರೆಯಾಗಿ ನಿಸ್ಸಾನ್ ಸಂಸ್ಥೆಯು ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.
ಜಪಾನ್ ನ ಯೊಕೊಹಾಮಾದಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಉತ್ಪನ್ನ ಪ್ರದರ್ಶನ ಸಮಾರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡು ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಈ ಮೂಲಕ ಭಾರತದಲ್ಲಿ ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮತ್ತು ಬಿ-ಎಂಪಿವಿ ಹಾಗೂ ಸಿ-ಎಸ್‌ಯುವಿ ವಿಭಾಗಗಳ ಬೇಡಿಕೆಗಳನ್ನು ಪೂರೈಸಲು ನಿಸ್ಸಾನ್ ಮುಂದಾಗಿದೆ. ಇದರ ಜೊತೆಗೆ ಬಿ-ಎಸ್‌ಯುವಿ ವಿಭಾಗದಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮುಂಚೂಣಿಯಲ್ಲಿ ಸಾಗುತ್ತಿದೆ.
ನಿಸ್ಸಾನ್ ಭಾರತದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತಾ ಬರುತ್ತಿದೆ. ದೇಶೀಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ರಫ್ತು ವಿಭಾಗದಲ್ಲಿ ಅಭಿವೃದ್ಧಿ ಸಾಧಿಸಿದೆ. ನಿಸ್ಸಾನ್ ನ ಹೊಸ ಉತ್ಪನ್ನಗಳಾದ 7 ಆಸನಗಳ ಬಿ-ಎಂಪಿವಿ (ಮಲ್ಟಿ-ಪರ್ಪಸ್ ವೆಹಿಕಲ್) ಆರ್ಥಿಕ ವರ್ಷ 25ರಲ್ಲಿ ಬಿಡುಗಡೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡಿರುವ ಈ ಉತ್ಪನ್ನವು ನಿಸ್ಸಾನ್ ನ ಭಾರತದ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಇದರ ನಂತರ ಆರ್ಥಿಕ ವರ್ಷ 26ರ ಆರಂಭದಲ್ಲಿ ಈ ಹಿಂದೆಯೇ ಘೋಷಿಸಲಾಗಿರುವ 5 ಆಸನಗಳ ಸಿ-ಎಸ್‌ಯುವಿ (ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಬಿಡುಗಡೆಯಾಗಲಿದೆ. ಈ ಕುರಿತಾಗಿ ಕಂಪನಿಯು ಇಂದು ಭಾರತದಲ್ಲಿ ಎರಡು ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಟೀಸರ್ ನಲ್ಲಿ ಎರಡೂ ವಾಹನಗಳ ಮಾಹಿತಿಯನ್ನು ಹಂಚಿಕೊಂಡಿದೆ. ನಿಸ್ಸಾನ್ ಮೋಟಾರ್ ಇಂಡಿಯಾ ಆರ್ಥಿಕ ವರ್ಷ 26ರ ವೇಳೆಗೆ ಭಾರತೀಯ ಗ್ರಾಹಕರಿಗಾಗಿ ಬಿ/ ಸಿ ಮತ್ತು ಡಿ-ಎಸ್‌ಯುವಿ ವಿಭಾಗಗಳಲ್ಲಿ 4 ಹೊಸ ಉತ್ಪನ್ನಗಳನ್ನು ಹೊಂದುವ ಯೋಜನೆ ರೂಪಿಸಿದೆ.
ಸಿ-ಎಸ್‌ಯುವಿಯನ್ನು ಭಾರತದಲ್ಲಿ ಈ ವಿಭಾಗದಲ್ಲಿ ಸಂಚಲನ ಸೃಷ್ಟಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಉತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಈ ಉತ್ಪನ್ನವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಹೊಸ ಸಿ-ಎಸ್‌ಯುವಿ, ನಿಸ್ಸಾನ್ ಎಸ್‌ಯುವಿ ಡಿಎನ್‌ಎಯನ್ನು ಹೊಂದಿದೆ. ವಿಶ್ವಾಸಾರ್ಹತೆ, ಪ್ರೀಮಿಯಂ ಕರಕುಶಲತೆ ಮತ್ತು ತಂತ್ರಜ್ಞಾನವನ್ನು ಹೊಂದಿರುವ ನಿಸ್ಸಾನ್ ಎಸ್‌ಯುವಿ ಡಿಎನ್‌ಎ ಹೊಂದಿರುವ ಸಿ-ಎಸ್‌ಯುವಿ ಭಾರತೀಯ ರಸ್ತೆಗಳಿಗೆ ಸೂಕ್ತವಾಗಿ ಮೂಡಿಬಂದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಯಶಸ್ಸಿನ ಆಧಾರದ ಮೇಲೆ ನಿಸ್ಸಾನ್ ಹೊಸ ಸಿ-ಎಸ್‌ಯುವಿಯನ್ನು ಪರಿಚಯಿಸುತ್ತಿದೆ, ಇದನ್ನು ಭಾರತದಲ್ಲಿ ತಯಾರಿಸಿ ಜಾಗತಿಕವಾಗಿ ರಫ್ತು ಮಾಡಲಾಗುತ್ತದೆ. ಈ 5 ಆಸನಗಳ ಸಿ-ಎಸ್‌ಯುವಿ ಚೆನ್ನೈ ಘಟಕದಿಂದ ಬರುವ ಎರಡನೇ ಮಾದರಿಯಾಗಿದೆ.
ನಿಸ್ಸಾನ್ 7 ಆಸನಗಳ ಬಿ-ಎಂಪಿವಿ ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯ, ಗುಣಮಟ್ಟ ಮತ್ತು ಸೌಲಭ್ಯವನ್ನು ಒದಗಿಸುತ್ತದೆ. ಈ ಬಿ-ಎಂಪಿವಿ ವಿಶಿಷ್ಟ ಶೈಲಿಯನ್ನು ಹೊಂದಿದ್ದು, ನಿಸಾನ್‌ನ ವಿಶಿಷ್ಟ ವಿನ್ಯಾಸ ತತ್ವಕ್ಕೆ ಪೂರಕವಾಗಿ ಸಿದ್ಧವಾಗಿದೆ. ಎಲ್ಲಾ ಸಾಲುಗಳಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವಂತೆ ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ.
ನಿಸ್ಸಾನ್ ಭಾರತದಲ್ಲಿ ವಾರ್ಷಿಕವಾಗಿ ದೇಶೀಯವಾಗಿ ಮತ್ತು ರಫ್ತು ವಿಭಾಗದಲ್ಲಿ 1,00,000 ಯೂನಿಟ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಗುರಿಯನ್ನು ಸಾಧಿಸಲು ಕಂಪನಿಯು ಚೆನ್ನೈನ ಅಲಯನ್ಸ್ ಜೆವಿ ಘಟಕದಲ್ಲಿ ಎರಡೂ ಹೊಸ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲಿದೆ.