ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ಬದಲಾಗಿ ಇಂದು ಕೋರ್ಟ್ ಗೆ ಅವರ ಪರ ವಕೀಲರು ಹಾಜರಾಗಿದ್ದರು.
ಸಿ.ಟಿ. ರವಿಗೆ ಒಂದೇ ದಿನ ಎರಡು ನೊಟೀಸ್ ನೀಡಲಾಗಿದೆ. ಹೀಗಾಗಿ ಅವರು ಹಾಜರಾಗಲು ಆಗಲಿಲ್ಲ ಎಂದು ಅವರ ಪರ ವಕೀಲರು ಮಾಹಿತಿ ನೀಡಿದರು. ಇದಕ್ಕೆ ಕೋರ್ಟ್ ಕೆಂಡಾಮಂಡಲವಾಯಿತು. ನಿಮಗೆ ಆಕ್ಷೇಪಣೆ ಇದ್ದರೆ ಸಲ್ಲಿಸಿ, ಇಲ್ಲವಾದರೆ ಆದೇಶ ಮಾಡುತ್ತೇನೆ. ಹೋಗಿ ವಾಯ್ಸ್ ಸ್ಯಾಂಪಲ್ ನೀಡಿ. ವಾಟ್ಸಾಪ್ ನಲ್ಲಿ ನೊಟೀಸ್ ಬಂದಿದೆ ಎನ್ನುತ್ತೀರಿ. ನೀವು ಮಾತ್ರ ಹೇಗೆ ಹಾಜರಾಗಿದ್ದೀರಿ? ನಾಳೆ ಸಮರ್ಪಕ ಉತ್ತರ ನೀಡದಿದ್ದರೆ, ಆದೇಶ ಮಾಡಬೇಕಾಗುತ್ತದೆ ಎಂದು ಜಡ್ಜ್ ಗರಂ ಆಗಿದ್ದರು.
ಈ ವೇಳೆ ಸಿ.ಟಿ. ರವಿ ಪರ ವಕೀಲರು, ದಯವಿಟ್ಟು ಬೇರೆ ದಿನ ಬೇಕು ಎಂದು ಮನವಿ ಮಾಡಿದರು. ಅದಕ್ಕೆ ಯಾಕೆ ಬೇರೆ ದಿನ ಬೇಕು ಎಂದು ಜಡ್ಜ್ ಪ್ರಶ್ನಿಸಿದರು. ವಕೀಲರು, ನನಗೆ ಇನ್ನೂ ಫೈಲ್ ಸಿಕ್ಕಿಲ್ಲ. ಹೀಗಾಗಿ ಬೇರೆ ದಿನ ಬೇಕು ಎಂದು ಮನವಿ ಮಾಡಿದರು. ನಂತರ ಮಂಗಳವಾರದವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೇಳಿದರು. ಪ್ರಕರಣದ ವಿಚಾರಣೆಯನ್ನು ಜ. 22ಕ್ಕೆ ಕೋರ್ಟ್ ಮುಂದೂಡಿತು.


















