ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಭರ್ಜರಿ ದಾಖಲೆ ಬರೆದಿದ್ದಾರೆ.
ವೀರೇಂದ್ರ ಸೆಹ್ವಾಗ್ ಹಿರಿಯ ಪುತ್ರ ಆರ್ಯವೀರ್ ದೆಹಲಿ ಅಂಡರ್-19 ತಂಡದ ಪರ ಆಡುತ್ತಿದ್ದಾರೆ. ಅಲ್ಲದೇ, ಕಿರಿಯ ಮಗ ವೇದಾಂತ್ ಸೆಹ್ವಾಗ್ ಕ್ರಿಕೆಟ್ ಅಂಗಳದಲ್ಲಿ ಸಂಚಲ ಮೂಡಿಸುತ್ತಿದ್ದಾರೆ. ವಿಜಯ್ ಮರ್ಚೆಂಟ್ ಟ್ರೋಫಿ ಟೂರ್ನಿಯಲ್ಲಿ ವೇದಾಂತ್ ಸೆಹ್ವಾಗ್ ಕಣಕ್ಕಿಳಿದಿದ್ದು, 16 ವರ್ಷದೊಳಗಿನವರ ಈ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಬೌಲರ್ ಆಗಿ ಕಣಕ್ಕಿಳಿದು ವೇದಾಂತ್ ದೆಹಲಿ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ.
5 ಪಂದ್ಯಗಳನ್ನಾಡಿರುವ 14 ವರ್ಷದ ವೇದಾಂತ್ ಈಗಾಗಲೇ ಒಟ್ಟು 24 ವಿಕೆಟ್ ಗಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಕೂಡ ತಮ್ಮ ಮಗನ ಬೌಲಿಂಗ್ ಅನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. 5 ಪಂದ್ಯಗಳಿಂದ 24 ವಿಕೆಟ್ ಕಬಳಿಸಿರುವ ಮಗನ ಸಾಧನೆಯನ್ನು ಸೆಹ್ವಾಗ್ ಕೊಂಡಾಡಿದ್ದಾರೆ.
ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ವೇದಾಂತ್ ಸೆಹ್ವಾಗ್ ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ವೇದಾಂತ್ ಎರಡು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವೇದಾಂತಕ್ಕೂ ಮುನ್ನ ಆರ್ಯವೀರ್ ಸೆಹ್ವಾಗ್ ಕೂಡ ಎಲ್ಲರ ಗಮನ ಸೆಳೆದಿದ್ದರು. ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಅಂಡರ್-19 ತಂಡ ಪರ ಕಣಕ್ಕಿಳಿದಿದ್ದ ಆರ್ಯವೀರ್ 297 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.