ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ.
ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಾಜ್ದೆಹ್ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನ. 15ರ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ಮತ್ತು ರಿತಿಕಾ ದಂಪತಿಗೆ 2018ರಲ್ಲಿ ಮೊದಲ ಮಗು ಜನಿಸಿತ್ತು. ಆರು ವರ್ಷದ ಬಳಿಕ ಮಗಳು ಸಮೈರಾಗೆ ಸಹೋದರ ಜನಿಸಿದ್ದಾನೆ. ಎರಡನೇ ಮಗುವಿನ ಜನನದ ಖುಷಿ ಸುದ್ದಿಯನ್ನು ಅಭಿಮಾನಿಗಳ ಜತೆ ರೋಹಿತ್ ಶರ್ಮಾ ಅಧಿಕೃತವಾಗಿ ಹೊರ ಹಾಕಿದ್ದಾರೆ.
ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾ ಅವರನ್ನು 2015ರ ಡಿಸೆಂಬರ್ 13ರಂದು ರೋಹಿತ್ ಶರ್ಮಾ ಮದುವೆಯಾಗಿದ್ದರು. ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಜತೆಗಿನ ನಿರ್ಣಾಯಕ ಬಾರ್ಡರ್- ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಿದೆ. ಈ ಸಂದರ್ಭದಲ್ಲಿ ಪತ್ನಿಯ ಜೊತೆಗಿರಲು ರೋಹಿತ್ ಶರ್ಮಾ ನಿರ್ಧರಿಸಿದ್ದರು. ಹೀಗಾಗಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿರಲಿಲ್ಲ. ಈಗ ಪತ್ನಿಯಿಂದ ಸಿಹಿ ಸುದ್ದಿ ಸಿಕ್ಕಿದೆ.
ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ನವೆಂಬರ್ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನವೇ ಮಗುವನ್ನು ಸ್ವಾಗತಿಸಿರುವ ರೋಹಿತ್ ಶರ್ಮಾ ಅವರು ತುರ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿ ತಂಡವನ್ನು ಕೂಡಿಕೊಳ್ಳಲು ಬಿಸಿಸಿಐ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯೂ ಇದೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳದಿದ್ದರೆ, ಉಪ ನಾಯಕನಾಗಿರುವ ವೇಗಿ ಜಸ್‌ಪ್ರೀತ್ ಬೂಮ್ರಾ ನಾಯಕನಾಗಿ ಕಾಣಿಸಿಕೊಳ್ಳಬಹುದು.