ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಕ್ಷಿಣ ಗೋವಾದಲ್ಲಿ 77 ಅಡಿ ಎತ್ತರದ ಶ್ರೀರಾಮನ ಬೃಹತ್ ಕಂಚಿನ ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು. ಇದು ವಿಶ್ವದಲ್ಲೇ ಅತಿ ಎತ್ತರದ ಶ್ರೀರಾಮನ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಕ್ಷಿಣ ಗೋವಾದ ಕಾಣಕೋಣದ ಪರ್ತಗಾಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಜರುಗಿದೆ. ಗುಜರಾತ್‌ನ ಪ್ರಸಿದ್ಧ ‘ಏಕತಾ ಪ್ರತಿಮೆ’ಯನ್ನು ವಿನ್ಯಾಸಗೊಳಿಸಿದ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರೇ ಈ ರಾಮನ ಮೂರ್ತಿಯನ್ನೂ ವಿನ್ಯಾಸಗೊಳಿಸಿರುವುದು ವಿಶೇಷ.
ಮಠದ 550ನೇ ವರ್ಷಾಚರಣೆ ಸಂಭ್ರಮ
ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠವು ಭಾರತದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದ್ದು, ಸಾರಸ್ವತ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಮಠದ ಪರಂಪರೆಗೆ 550 ವರ್ಷ ತುಂಬಿದ ಹಿನ್ನೆಲೆಯಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗೋವಾದಲ್ಲಿರುವ ಮಠದ ಶಾಖೆಯು 370 ವರ್ಷಗಳ ಇತಿಹಾಸವನ್ನು ಹೊಂದಿದೆ.
ಉಡುಪಿಯಲ್ಲಿ ‘ಲಕ್ಷ ಕಂಠ ಗೀತಾ ಪಾರಾಯಣ’
ಗೋವಾ ಭೇಟಿಗೂ ಮುನ್ನ ಕರ್ನಾಟಕದ ಉಡುಪಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿನ ಶ್ರೀ ಕೃಷ್ಣ ಮಠದಲ್ಲಿ ನಡೆದ ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು ಒಂದು ಲಕ್ಷ ಭಕ್ತರು, ವಿದ್ಯಾರ್ಥಿಗಳು ಮತ್ತು ವಿದ್ವಾಂಸರೊಂದಿಗೆ ಸೇರಿ ಪ್ರಧಾನಿಯವರು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು.
ಇದೇ ವೇಳೆ ಅವರು ಕೃಷ್ಣನ ಗರ್ಭಗುಡಿಯ ಮುಂಭಾಗದಲ್ಲಿರುವ ‘ಸುವರ್ಣ ತೀರ್ಥ ಮಂಟಪ’ವನ್ನು ಉದ್ಘಾಟಿಸಿದರು ಹಾಗೂ ಕನಕದಾಸರಿಗೆ ಶ್ರೀಕೃಷ್ಣನ ದರ್ಶನವಾಗಿದ್ದ ಪವಿತ್ರ ‘ಕನಕನ ಕಿಂಡಿ’ಗೆ ಚಿನ್ನದ ಕವಚವನ್ನು (ಕನಕ ಕವಚ) ಅರ್ಪಿಸಿದರು.
ಜನಸಂಘದ ಆಡಳಿತ ಮಾದರಿ ಸ್ಮರಣೆ
ಉಡುಪಿಯ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಿರಿಯ ನಾಯಕ ವಿ.ಎಸ್. ಆಚಾರ್ಯ ಮತ್ತು ಜನಸಂಘದ ಆಡಳಿತವನ್ನು ನೆನಪಿಸಿಕೊಂಡರು. “ಉಡುಪಿಯು ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತದ ಕರ್ಮಭೂಮಿಯಾಗಿದೆ. 1968ರಲ್ಲೇ ಇಲ್ಲಿನ ಜನತೆ ವಿ.ಎಸ್. ಆಚಾರ್ಯ ಅವರನ್ನು ಆರಿಸುವ ಮೂಲಕ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿದ್ದರು. 70ರ ದಶಕದಲ್ಲೇ ಇಲ್ಲಿನ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಮಾದರಿಯಾಗಿತ್ತು,” ಎಂದು ಪ್ರಧಾನಿ ಶ್ಲಾಘಿಸಿದರು.
ಇದನ್ನೂ ಓದಿ: ಉಡುಪಿಯಲ್ಲಿ ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿಧಾತ’ ಬಿರುದು ನೀಡಿ ಸನ್ಮಾನಿಸಿದ ಪುತ್ತಿಗೆ ಶ್ರೀಗಳು



















