ಟಿ20 ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಜಿಂಬಾಬ್ವೆ ಐತಿಹಾಸಿಕ ದಾಖಲೆ ಬರೆದಿದೆ.
ನೈರೋಬಿಯಾದಲ್ಲಿ ನಡೆದ ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 4 ವಿಕೆಟ್ ಗೆ ಬರೋಬ್ಬರಿ 344 ರನ್ ಗಳಿಸಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಆಗಿದೆ.
ಇದರೊಂದಿಗೆ ಸೀಮಿತ ಓವರ್ಗಳ ಪಂದ್ಯಗಳಲ್ಲಿ 300+ ಹಾಗೂ 400+ ರನ್ ಗಳಿಸಿದ ವಿಶ್ವದ ಏಕೈಕ ತಂಡ ಎಂಬ ದಾಖಲೆಯನ್ನು ಜಿಂಬಾಬ್ವೆ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 300+ ಹಾಗೂ 400ಕ್ಕೂ ಅಧಿಕ ರನ್ ಗಳಿಸಿದ ವಿಶೇಷ ದಾಖಲೆಯೊಂದನ್ನು ಜಿಂಬಾಬ್ವೆ ಮಾಡಿದಂತಾಗಿದೆ.
2023ರ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ 50 ಓವರ್ ಗಳಲ್ಲಿ 408 ರನ್ ಗಳನ್ನು ಗಳಿಸಿತ್ತು. ಈಗ ಟಿ20 ಕ್ರಿಕೆಟ್ ನಲ್ಲಿ 20 ಓವರ್ ಗಳಲ್ಲಿ 344 ರನ್ ಗಳಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ 300 ಹಾಗೂ ಏಕದಿನ ಕ್ರಿಕೆಟ್ನಲ್ಲಿ 400 ರನ್ಗಳ ಗಡಿದಾಟಿದ ವಿಶ್ವದ ಏಕೈಕ ತಂಡ ಎಂಬ ದಾಖಲೆ ಈಗ ಜಿಂಬಾಬ್ವೆ ಪಾಲಾಗಿದೆ.
ಇಲ್ಲಿಯವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಸೇರಿದಂತೆ ಒಟ್ಟು 6 ತಂಡಗಳು 400ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿವೆ. ಆದರೆ, ಜಿಂಬಾಬ್ವೆ ಹೊರತು ಪಡಿಸಿ ಇನ್ನುಳಿದ ತಂಡಗಳು ಟಿ20ಯಲ್ಲಿ 300ಕ್ಕೂ ಅಧಿಕ ರನ್ ಗಳಿಸಲು ಆಗಿಲ್ಲ. ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 344 ರನ್ ಗಳಿಸಿದ್ದ ಜಿಂಬಾಬ್ವೆ ತಂಡ 290 ರನ್ ಗಳಿಂದ ಗೆಲುವು ಕಂಡಿದೆ. ಗ್ಯಾಂಬಿಯಾ ಕೇವಲ 54 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರೀ ಅಂತರದಿಂದ ಗೆದ್ದ ವಿಶ್ವ ದಾಖಲೆಯನ್ನೂ ಜಿಂಬಾಬ್ವೆ ಮಾಡಿದೆ.