ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದ್ದು, ಎರಡೂ ದೇಶಗಳು ದಿನಾಂಕವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಒಲೆಕ್ಸಾಂಡರ್ ಪೊಲಿಶ್ಚುಕ್ ಖಚಿತಪಡಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಭಾರತದ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉಕ್ರೇನ್ ಬಯಸುತ್ತಿದೆ. ರಷ್ಯಾದೊಂದಿಗೆ ಭಾರತವು ಹೊಂದಿರುವ ಉತ್ತಮ ಸಂಬಂಧದಿಂದಾಗಿ, ಶಾಂತಿ ಮಾತುಕತೆಯಲ್ಲಿ ಭಾರತವನ್ನು ಪ್ರಮುಖ ಪಾಲುದಾರನಾಗಿ ಉಕ್ರೇನ್ ನೋಡುತ್ತಿದೆ ಎಂದು ರಾಯಭಾರಿ ಒಲೆಕ್ಸಾಂಡರ್ ಹೇಳಿದ್ದಾರೆ.
“ಶಾಂತಿ ನಿರ್ಮಾಣ ಪ್ರಕ್ರಿಯೆಯಲ್ಲಿ, ವಿಶೇಷವಾಗಿ ರಷ್ಯಾದೊಂದಿಗಿನ ರಾಜಕೀಯ ಮಾತುಕತೆಗಳಲ್ಲಿ ಭಾರತವು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.
ಯುದ್ಧದ ವಿಚಾರದಲ್ಲಿ ಭಾರತದ ನಿಲುವನ್ನು ಶ್ಲಾಘಿಸಿದ ಅವರು, “ಭಾರತ ತಟಸ್ಥವಾಗಿಲ್ಲ, ಶಾಂತಿ ಮತ್ತು ಮಾತುಕತೆಯ ಪರವಾಗಿದೆ” ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದರು. 2023 ರಿಂದ ಭಾರತ ಮತ್ತು ಉಕ್ರೇನ್ ನಡುವಿನ ಸಂಬಂಧಗಳು ಸುಧಾರಿಸಿದ್ದು, ಉಭಯ ದೇಶಗಳು ಭವಿಷ್ಯದಲ್ಲಿ ‘ಕಾರ್ಯತಂತ್ರದ ಪಾಲುದಾರಿಕೆ’ ಹೊಂದುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪೊಲಿಶ್ಚುಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೆಲೆನ್‌ಸ್ಕಿ ಭೇಟಿಯಾಗಿ ಶಾಂತಿ ಮಾತುಕತೆ ನಡೆಸಿದ ಬೆನ್ನಲ್ಲೇ ಜೆಲೆನ್‌ಸ್ಕಿ ಅವರ ಭಾರತ ಭೇಟಿ ಮಹತ್ವ ಪಡೆದಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಈ ವಿಷಯದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಉಕ್ರೇನ್ ರಾಯಭಾರಿ ಹೇಳಿದ್ದಾರೆ.
ಕಳೆದ ವಾರ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ್ದ ಜೆಲೆನ್‌ಸ್ಕಿ, ಜಾಗತಿಕ ಶಾಂತಿ ಪ್ರಯತ್ನಗಳಲ್ಲಿ, ವಿಶೇಷವಾಗಿ ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಆಗಸ್ಟ್ 2024 ರಲ್ಲಿ, ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ ‘ಸ್ನೇಹಿತನಾಗಿ’ ಶಾಂತಿ ಸ್ಥಾಪನೆಗೆ ಸಹಾಯ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು ಎಂಬುದು ಗಮನಾರ್ಹ.