ನವದೆಹಲಿ: ಪಾಕಿಸ್ತಾನ ತಂಡದ ಚಾಂಪಿಯನ್ಸ್ ಟ್ರೋಫಿಯಿಂದ ಹೊರಕ್ಕೆ ಬಿದ್ದಿದೆ. ಹೀಗಾಗಿ ಟೀಕೆಗಳನ್ನು ಎಲ್ಲ ಕಡೆಯಿಂದಲೂ ಎದುರಿಸುತ್ತಿದೆ. ಪಾಕಿಸ್ತಾನ ತಂಡ ದಶಕಗಳ ಹಿಂದೆ ಹೊಂದಿದ್ದ ಪ್ರತಿಭೆಗಳು ಹಾಗೂ ಜಿದ್ದು ಕಳೆದುಕೊಂಡಿದೆ ಎಂದು ಆರೋಪಗಳು ಕೇಳಿ ಬಂದಿವೆ.
ಇದೀಗ ಪಾಕಿಸ್ತಾನ ತಂಡವನ್ನು ಭಾರತ ತಂಡದ ಮಾಜಿ ವೇಗದ ಬೌಲರ್ ಯೋಗರಾಜ್ ಸಿಂಗ್ ಟೀಕಿಸಿದ್ದಾರೆ. ಜತೆಗೆ ಅವರು ಪರಿಹಾರ ಕೂಡ ಹೇಳಿದ್ದಾರೆ. ತಾವೇ ಪಾಕಿಸ್ತಾನ ತಂಡಕ್ಕೆ ಕೋಚ್ ಆಗಿ ಆ ತಂಡವನ್ನು ಉದ್ಧಾರ ಮಾಡುವುದಾಗಿ ಹೇಳಿದ್ದಾರೆ.
ಮೊಹಮ್ಮದ್ ರಿಜ್ವಾನ್ ನಾಯಕತ್ವದ ಪಾಕಿಸ್ತಾನ ತಂಡ, ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಭಾರತದ ವಿರುದ್ದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಅಂದಹಾಗೆ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನ ತಂಡ ಕಾದಾಟ ನಡೆಸಲಿದೆ.
ನಾಕ್‌ಔಟ್ ರೇಸ್‌ನಿಂದ ಹೊರ ಬಿದ್ದ ಪಾಕಿಸ್ತಾನ ತಂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಆದರೆ, ಭಾರತ ತಂಡದ ಮಾಜಿ ವೇಗಿ ಹಾಗೂ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಪಾಕ್ ಮಾಜಿ ಕ್ರಿಕೆಟಿಗರನ್ನು ಟೀಕಿಸಿದ್ದಾರೆ.
ಪಾಕಿಸ್ತಾನ ತಂಡವನ್ನು ಟೀಕಿಸುವ ಬದಲು ಪಾಕ್ ತಂಡಕ್ಕೆ ತಮ್ಮನ್ನು ಕೋಚ್ ಆಗಿ ನೇಮಿಸಿದರೆ ಆ ತಂಡವನ್ನು ಉದ್ದಾರ ಮಾಡುವುದಾಗಿ ಹೇಳಿದ್ದಾರೆ. “ಕಾಮೆಂಟರಿ ಮಾಡುವ ಮೂಲಕ ವಸೀಮ್ ಹಣವನ್ನು ಗಳಿಸುತ್ತಿದ್ದಾರೆ. ತಮ್ಮ ದೇಶಕ್ಕೆ ವಾಪಸ್ ಹೋಗಿ ಹಾಗೂ ತಮ್ಮ ಆಟಗಾರರಿಗೆ ಕ್ಯಾಂಪ್‌ಗಳನ್ನು ಆಯೋಜಿಸಿ. ಪಾಕಿಸ್ತಾನ ತಂಡ ವಿಶ್ವಕಪ್ ಗೆಲ್ಲಲು ಯಾವ ಮಾಜಿ ಆಟಗಾರ ನೆರವು ನೀಡಲಿದ್ದಾರೆಂದು ನಾನು ನೋಡಬೇಕು. ಒಂದು ವೇಳೆ ವಿಶ್ವಕಪ್ ಗೆದ್ದಿಲ್ಲವಾದರೆ, ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಅಗತ್ಯವಿದ್ದರೆ, ನಾನೇ ಪಾಕಿಸ್ತಾನ ತಂಡಕ್ಕೆ ಕೋಚ್ ಆಗುತ್ತೇನೆ. ಒಂದು ವರ್ಷದಲ್ಲಿ ಈ ತಂಡವನ್ನು ಬಲಿಷ್ಠಗೊಳಿಸುತ್ತೇನೆ ಹಾಗೂ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ನನ್ನ ಅಕಾಡೆಮಿಯಲ್ಲಿ ನಾನು ಒಟ್ಟು 12 ಗಂಟೆಗಳ ಕಾಲ ಸಮಯವನ್ನು ಕಳೆಯುತ್ತಿದ್ದೇನೆ. ನಿಮ್ಮ ಸ್ವಂತ ದೇಶಕ್ಕೆ ನೀವು ರಕ್ತ ಮತ್ತು ಬೆವರನ್ನು ಹರಿಸಬೇಕಾಗುತ್ತದೆ,” ಎಂದು ನ್ಯೂಸ್ 18ಗೆ ಯೋಗರಾಜ್ ಸಿಂಗ್ ತಿಳಿಸಿದ್ದಾರೆ.
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್. ಅವರು ಕೋಚ್ ಆಗಿ ಕೆಲಸ ಮಾಡಿದ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಸೇರಿದಂತೆ ಸಾಕಷ್ಟು ಯುವ ಕ್ರಿಕೆಟಿಗರಿಗೆ ಅವರು ಕೋಚಿಂಗ್ ಕೊಟ್ಟಿದ್ದಾರೆ. ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಜುನ್ ಶತಕವನ್ನು ಸಿಡಿಸಿದ್ದರು.