ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್ ಕೂಡ ಈಗ ಪ್ರತಿರೋಧದ ಬಿಸಿ ಎದುರಿಸುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಪೂರ್ಣ ಬೆಂಬಲ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದ್ದಾರೆ. ದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಡಿಸೆಂಬರ್‌ನೊಳಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಚುನಾವಣೆಗೆ ಸ್ಪಷ್ಟ ರೂಪುರೇಷೆ ಕೋರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇನ್ನೊಂದೆಡೆ ಯೂನುಸ್ ಅವರ ರಾಜೀನಾಮೆಯ ಎಚ್ಚರಿಕೆಯನ್ನು, ಢಾಕಾದಲ್ಲಿ ಮತ್ತೊಂದು ಸುತ್ತಿನ ಜನಾಂದೋಲನವನ್ನು ಆರಂಭಿಸಲು ನಡೆಸಿರುವ ಒಂದು ತಂತ್ರವೆಂದು ಕೆಲವರು ಅಂದಾಜಿಸಿದ್ದಾರೆ. ವಿದ್ಯಾರ್ಥಿ ನಾಯಕರು ಮತ್ತು ಇಸ್ಲಾಮಿಸ್ಟ್ ಗುಂಪುಗಳು ಶುಕ್ರವಾರದ ಪ್ರಾರ್ಥನೆಯ ನಂತರ ಢಾಕಾದ ಸೇನಾ ಶಿಬಿರಕ್ಕೆ ಮೆರವಣಿಗೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ತಿಳಿಸಿವೆ. ಈ ಪ್ರತಿಭಟನೆಗಳು ಯೂನುಸ್ ಆಡಳಿತದ ವಿರುದ್ಧ ಒತ್ತಡವನ್ನು ಹೆಚ್ಚಿಸಿವೆ.
ಗುರುವಾರ ಬಿಎನ್‌ಪಿ ನಡೆಸಿದ ದೊಡ್ಡ ಪ್ರಮಾಣದ ಪ್ರತಿಭಟನೆಯು ಯೂನುಸ್ ಆಡಳಿತದ ವಿರುದ್ಧದ ಮೊದಲ ಪ್ರಮುಖ ಜನಾಂದೋಲನವಾಗಿತ್ತು. ಈ ಪ್ರತಿಭಟನೆಯು ಚುನಾವಣೆಗೆ ರೂಪುರೇಷೆ ಘೋಷಣೆ, ಢಾಕಾ ದಕ್ಷಿಣ ನಗರದ ಮೇಯರ್ ಸ್ಥಾನಕ್ಕೆ ಬಿಎನ್‌ಪಿ ಅಭ್ಯರ್ಥಿಯನ್ನು ಘೋಷಿಸುವುದು ಮತ್ತು ಇಬ್ಬರು ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಖಲೀಲುರ್ ರಹಮಾನ್ ರಾಜೀನಾಮೆಗೆ ಒತ್ತಾಯಿಸಿ ನಡೆಯಿತು.
ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರ ಸರ್ಕಾರವನ್ನು ವಿದ್ಯಾರ್ಥಿಗಳ ನೇತೃತ್ವದ ಆಂದೋಲನದ ಮೂಲಕ ಪತನಗೊಳಿಸಲಾಗಿತ್ತು. ತದನಂತರ ಅಧಿಕಾರಕ್ಕೇರಿದ ಯೂನುಸ್ ಈಗ ರಾಜೀನಾಮೆಯ ಬೆದರಿಕೆ ಹಾಕಿರುವುದು ಹೊಸ ಕಾರ್ಯತಂತ್ರದ ಭಾಗ ಅಥವಾ ನಾಟಕೀಯ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ. ಆಗಸ್ಟ್ 5, 2024ರಂದು ಹಸೀನಾ ಅವರು ದೇಶ ತೊರೆದ ನಂತರ ಯೂನುಸ್ ಮಧ್ಯಂತರ ಸರ್ಕಾರದ ನಾಯಕರಾಗಿ ನೇಮಕಗೊಂಡಿದ್ದರು. ಆದರೆ, ಅವರ ಆಡಳಿತವು ರಾಜಕೀಯ ಪಕ್ಷಗಳ ಒತ್ತಡ, ವಿದ್ಯಾರ್ಥಿ ಆಂದೋಲನಗಳು ಮತ್ತು ಇಸ್ಲಾಮಿಸ್ಟ್ ಗುಂಪುಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿದೆ.
ಕಳೆದ ವರ್ಷ ನಡೆದ ವಿದ್ಯಾರ್ಥಿ ಹೋರಾಟದ ನಾಯಕರಲ್ಲಿ ಒಬ್ಬರಾದ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿಯ (NCP) ಸಂಸ್ಥಾಪಕ ನಾಹಿದ್ ಇಸ್ಲಾಂ ಕೂಡ ಯೂನುಸ್ ರಾಜೀನಾಮೆಗಾಗಿ ಕಾಯುತ್ತಿದ್ದಾರೆ. ಯೂನುಸ್ ವಿರುದ್ಧ ಬಾಂಗ್ಲಾದಲ್ಲಿ ದಿನೇ ದಿನೇ ಅಸಮಾಧಾನ ಭುಗಿಲೇಳುತ್ತಿದೆ. ಈ ಬಿಕ್ಕಟ್ಟಿನಿಂದ ಬಾಂಗ್ಲಾದಲ್ಲಿ ಮತ್ತೊಮ್ಮೆ ಭಾರೀ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಯಿದೆ. ಯೂನುಸ್‌ರ ಆಡಳಿತವು ಚುನಾವಣೆಗೆ ಒತ್ತಡದ ಮಧ್ಯೆ ರಾಜಕೀಯ ಸಂಕೀರ್ಣತೆಯನ್ನೂ ಎದುರಿಸುತ್ತಿದೆ. ಈ ರಾಜೀನಾಮೆಯ ಎಚ್ಚರಿಕೆಯು ದೇಶದ ರಾಜಕೀಯ ಭವಿಷ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ತಜ್ಞರು ಊಹಿಸಿದ್ದಾರೆ.



















