ಮುಂಬೈ: ಪ್ರೀತಿಯಲ್ಲಿ ಬ್ರೇಕಪ್ ಆದ ಕೇವಲ ಒಂದು ವಾರದೊಳಗೆ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಚಾಕುವಿನಿಂದ ಇರಿದು, ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
24 ವರ್ಷದ ಸೋನು ಬರಾಯ್ ಮತ್ತು ಮನೀಶಾ ಯಾದವ್ ಕೆಲವು ಕಾಲದಿಂದ ಪ್ರೀತಿಸುತ್ತಿದ್ದರು. ಆದರೆ, ಎಂಟು ದಿನಗಳ ಹಿಂದೆಯಷ್ಟೇ ಇಬ್ಬರೂ ಬೇರೆಯಾಗಿದ್ದರು. ಮನೀಶಾಳ ಶೀಲವನ್ನು ಶಂಕಿಸುತ್ತಿದ್ದ ಸೋನು, ಆಕೆಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು.
ಶುಕ್ರವಾರ, ಸೋನು ಮನೆಯಿಂದ ಅಡುಗೆಗೆ ಬಳಸುವ ಚಾಕುವನ್ನು ತೆಗೆದುಕೊಂಡು ಬಂದಿದ್ದ. ಬಳಿಕ ಮನೀಶಾಗೆ ಕರೆ ಮಾಡಿ, “ಕೊನೆಯ ಬಾರಿಗೆ” ಭೇಟಿಯಾಗಲು ನರ್ಸಿಂಗ್ ಹೋಂ ಬಳಿ ಬರುವಂತೆ ಹೇಳಿದ್ದ. ಅಲ್ಲಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದ್ದು, ಕೋಪಗೊಂಡ ಸೋನು ಮನೀಶಾಗೆ ಚಾಕುವಿನಿಂದ ಇರಿದಿದ್ದಾನೆ.
ಬಳಿಕ, ಅದೇ ಚಾಕುವಿನಿಂದ ತನ್ನ ಕತ್ತು ಸೀಳಿಕೊಂಡಿದ್ದಾನೆ. ನರ್ಸಿಂಗ್ ಹೋಂನ ಪ್ರವೇಶ ದ್ವಾರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೋನು, ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೀಶಾ ಯಾದವ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



















