ತುಮಕೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಮಿತಿ ಮೀರುತ್ತಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಹಲವಾರು ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಯುವಕರಿಗೆ ಹೃದಯಾಘಾತಗಳು ಆಗುತ್ತಿರುವುದು ಚಿಂತೆಗೆ ದೂಡುವಂತೆ ಮಾಡಿದೆ. ಜಿಲ್ಲೆಯ ಗುಬ್ಬಿಯಲ್ಲಿ 23 ವರ್ಷದ ಯುವಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆಯೊಂದು ಈಗ ವರದಿಯಾಗಿದೆ.
ಸ್ನೇಹಿತನ ಸಂಬಂಧಿಕರ ಮನೆಗೆ ತೆರಳಿ ಮರಳಿ ಬರುತ್ತಿದ್ದ ವೇಳೆ ಯುವಕ ಹಠಾತ್ ಕುಸಿದು ಬಿದ್ದಿದ್ದಾನೆ. ಈ ವೇಳೆ ಎದೆ ನೋವು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಚಿಕ್ಕನಾಯಕನಹಳ್ಳಿ ಬಳಿ ತನ್ನ ಸ್ನೇಹಿತರೊಬ್ಬರ ಮನೆಯ ಶುಭ ಸಮಾರಂಭಕ್ಕೆ ತೆರಳಿ ಮರಳಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗುಬ್ಬಿ ತಾಲ್ಲೂಕಿನ ಹೊಸಕೆರೆ ಸಮೀಪದ ಅರೇಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಸಿದ್ದೇಶ್ ಹೃದಯಾಘಾತಕ್ಕೆ ಬಲಿಯಾಗಿರುವ ಯುವಕ ಎನ್ನಲಾಗಿದೆ.
ಕೇವಲ 22 ದಿನಗಳ ಹಿಂದೆ ಪ್ರೀತಿಸಿ ಸಿದ್ದೇಶ್ ಮದುವೆಯಾಗಿದ್ದರು. ಕಳೆದ 22 ದಿನಗಳ ಹಿಂದೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದ ಯಶಸ್ವಿನಿ ಹಾಗೂ ಹೊಸಕೆರೆ ಅರೇಹಳ್ಳಿ ಗ್ರಾಮದ ಮೃತ ಸಿದ್ದೇಶ ಪೊಲೀಸರ ಸಮ್ಮುಖದಲ್ಲಿ ಪ್ರೇಮ ವಿವಾಹ ಆಗಿತ್ತು. ಆದರೆ, ತಿಂಗಳು ಮುಗಿಯುವ ಮುನ್ನವೇ ಸಾವನ್ನಪ್ಪಿದ್ದು, ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.