ಮುಂಬೈ: ದಾಳಿಕೋರನಿಂದ ಚೂರಿ ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಚಿಕಿತ್ಸೆಗೆ ಆಗಿರುವ ಒಟ್ಟು ವೆಚ್ಚವೆಷ್ಟು ಗೊತ್ತೇ?
ಒಂದಲ್ಲ ಎರಡಲ್ಲ, ಬರೋಬ್ಬರಿ 36 ಲಕ್ಷ ರೂಪಾಯಿಗಳು! ಸೈಫ್ ಅಲಿ ಖಾನ್ ಅವರ ಆರೋಗ್ಯ ವಿಮೆಯ ವಿವರಗಳು ಟ್ವೀಟರ್‌ನಲ್ಲಿ ಲೀಕ್ ಆಗಿದ್ದು, ಅದರಲ್ಲಿರುವ ಮಾಹಿತಿಯಂತೆ ಲೀಲಾವತಿ ಆಸ್ಪತ್ರೆಯು(Lilavati Hospital) ಸೈಫ್ ಅವರ ಚಿಕಿತ್ಸೆಗೆ 35 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿರುವುದು ಬಹಿರಂಗವಾಗಿದೆ. ಇದೇ ವೇಳೆ ನಟನಿಗೆ ಸಂಬಂಧಿಸಿದ ಖಾಸಗಿ ವಿಚಾರವಾದ ಇನ್ಶೂರೆನ್ಸ್ ಮಾಹಿತಿಯು ಸೋರಿಕೆಯಾಗಿರುವ ಬಗ್ಗೆ ತೀವ್ರ ಆಕ್ಷೇಪವೂ ವ್ಯಕ್ತವಾಗುತ್ತಿದೆ.
ಜನವರಿ 16ರಂದೇ ಸೈಫ್ ಅಲಿ ಖಾನ್ ಅವರು ತಮ್ಮ ವಿಮೆಯ ಆಧಾರದಲ್ಲಿ ನಗದುರಹಿತ (ಕ್ಯಾಶ್‌ಲೆಸ್) ಚಿಕಿತ್ಸೆಗೆ ಅನುಮತಿ ಕೋರಿದ್ದರು. ಅದರ ಪ್ರಕಾರ, ಜ.16ರಿಂದ ಜ.21ರವರೆಗೆ ಅಂದರೆ 5 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಲಿದ್ದಾರೆ. ಒಟ್ಟಾರೆ ಚಿಕಿತ್ಸಾ ವೆಚ್ಚ 35,98,700 ರೂಪಾಯಿಗಳು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ 25 ಲಕ್ಷ ರೂ.ಗಳಿಗೆ ವಿಮೆ ಕವರೇಜ್ ಇರಲಿದೆ. ಉಳಿದ ಮೊತ್ತವನ್ನು ನಟನ ಕುಟುಂಬವೇ ಭರಿಸಬೇಕಾಗುತ್ತದೆ.
ಬುಧವಾರ ತಡರಾತ್ರಿ 2.30ರ ವೇಳೆಗೆ ತಮ್ಮ ಬಂಗಲೆಗೆ ನುಗ್ಗಿದ್ದ ದಾಳಿಕೋರನಿಂದ ಕುಟುಂಬವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸೈಫ್ ಆರೋಪಿಯೊಂದಿಗೆ ಬರಿಗೈಯ್ಯಲ್ಲಿ ಹೋರಾಡಿದ್ದರು. ಈ ಸಂದರ್ಭದಲ್ಲಿ ದಾಳಿಕೋರನು ಸೈಫ್ ಅವರ ದೇಹದ 6 ಕಡೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ರಕ್ತದಲ್ಲಿ ತೋಯ್ದು ಹೋಗಿದ್ದ ಸೈಫ್ ಅವರನ್ನು ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆನ್ನುಹುರಿಯಲ್ಲಿ 2.5 ಇಂಚಿನ ಚೂರಿಯು ಹೊಕ್ಕಿದ್ದ ಕಾರಣ, ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯಲಾಗಿತ್ತು. ಪ್ರಸ್ತುತ ಸೈಫ್ ಅವರು ಚೇತರಿಸಿಕೊಳ್ಳುತ್ತಿದ್ದು, ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.