ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣಗಳ ಕಿತ್ತಾಟ ಈಗ ಹಾದಿ ಬೀದಿ ರಂಪವಾಗಿದೆ. ಈ ಮಧ್ಯೆ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡುವಂತೆ ಒಂದು ಬಣ ಪಟ್ಟು ಹಿಡಿದಿದ್ದರೆ, ರೆಬೆಲ್ ನಾಯಕರು ಪ್ರತ್ಯೇಕ ಸಭೆ ನಡೆಸಿದ್ದಾರೆ.
ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಅವರ ತಂಡದವರು ಶನಿವಾರವಷ್ಟೇ ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ದುಷ್ಟ ಸಂಹಾರ ಆಗುತ್ತದೆ ಎಂದಿದ್ದರು. ಅಲ್ಲದೇ, ಭಾನುವಾರ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಯತ್ನಾಳ್ ಉಚ್ಚಾಟನೆಗೆ ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾತನಾಡಿರುವ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಶಾಸಕ ಯತ್ನಾಳ್ ಜೊತೆ ಇರೋರು ನಾಲ್ಕೇ ಜನ. ಡಿಸೆಂಬರ್ 11ರಂದು ದಾವಣಗೆರೆಯಲ್ಲಿ ಸಭೆ ಸೇರುತ್ತೇವೆ. ಯತ್ನಾಳ್ರನ್ನು ಉಚ್ಚಾಟನೆ ಮಾಡುವ ಕುರಿತು ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪೇಪರ್ ಸಿಂಹ ನಮ್ಮ ಬಗ್ಗೆ ಮಾತಾಡಿದ್ದಾರೆ. ಯಾವುದೋ ಕಾರಣಗಳಿಗೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಿದ್ದಾರೆ. ಜನರು ನಮ್ಮನ್ನು ತಿಪ್ಪೆಗೆ ಎಸೆದಿಲ್ಲ. ಆದರೆ ನಿಮ್ಮ ರೀತಿ ಪೇಪರ್ ಸಿಂಹ ಅಲ್ಲ. ಮೈಸೂರಲ್ಲಿ ಎಷ್ಟು ಸಂಘಟನೆ ಮಾಡಿದ್ದೀರಿ? ಎಷ್ಟು ಜನರ ಗೆಲ್ಲಿಸಿದ್ದೀರಿ? ಕೊಡಗು, ಮೈಸೂರಿನಲ್ಲಿ ಸ್ವಸಾಮರ್ಥ್ಯದಿಂದ ನಮ್ಮವರು ಗೆದ್ದಿದ್ದಾರೆ. ನಿನಗೆ ಸಾಮರ್ಥ್ಯ ಇದ್ದಿದ್ದರೆ ಯಾಕೆ ನಿಮ್ಮವರನ್ನು ಗೆಲ್ಲಿಸಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ ಸಹ ಬೆಳಗಾವಿಯಲ್ಲಿ ರಹಸ್ಯ ಸಭೆ ನಡೆಸಿದೆ. ಬೆಳಗಾವಿ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ, ದೆಹಲಿಯಲ್ಲಿ ವರಿಷ್ಠರ ಜೊತೆ ಚರ್ಚಿಸುವ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರೆಬೆಲ್ ಟೀಮ್ ನಿಂದ ವಕ್ಫ್ ವಿರುದ್ಧ ಹೋರಾಟ ನಡೆಯುತ್ತಿದೆ.