ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಸಂಕಲ್ಪ ಪತ್ರ ಹೆಸರಿನ ಮೂಲಕ ತಮ್ಮನ್ನು ಬೆಂಬಿಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಎಕ್ಸ್ ಪೋಸ್ಟ್ ಮೂಲಕ ಪತ್ರ ಬಹಿರಂಗ ಪಡಿಸಿರುವ ಅವರು, ಸಂಕಲ್ಪ ಪತ್ರ. ಬಂಧುಗಳೇ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀ ವಿಶ್ವಾವಸು ಸಂವತ್ಸರವು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ. ರೈತರಿಗೆ, ಶ್ರಮಿಕರಿಗೆ ಈ ಸಂವತ್ಸರವು ಫಲಪ್ರದಾಯಕವಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಜನ ಸೇವೆ ಮಾಡದೇ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಮಹಾಭಾರತದಲ್ಲಿ ಜಯಗಳಿಸಿದ್ದು, ಕೃಷ್ಣಾರ್ಜುನರೇ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಅಲ್ಲದೇ, ರಾಮ ರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ತೀಕ್ಷ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಜಾಲತಾಣದ ಮೂಲಕ ತಮ್ಮ ಶುಭ ಹಾರೈಕೆಗಳನ್ನು, ಬೆಂಬಲ, ಪ್ರೋತ್ಸಾಹವನ್ನು ತೋರಿಸುತ್ತಿರುವ ಎಲ್ಲಾ ಸಹೃದಯೀ ಸ್ನೇಹಿತರಿಗೂ, ಅಭಿಮಾನಿಗಳಿಗೂ, ಹಿತೈಷಿಗಳಿಗೂ ಹಾಗೂ ಕರೆ ಮಾಡಿ ಬೆಂಬಲ, ಮನೋಸ್ಥೈರ್ಯ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಭಾರತ ಮಾತೆಗೆ ಜಯವಾಗಲಿ ಎಂದು ಬರೆದುಕೊಂಡಿದ್ದಾರೆ.


















