ಭಾರತ ತಂಡದಲ್ಲಿ ಹಲಲು ದಿನಗಳ ಕಾಲ ಮಿಂಚಿದ್ದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಈಗ ಮತ್ತೆ ತಂಡ ಸೇರುವ ತವಕದಲ್ಲಿದ್ದಾರೆ. ಆದರೆ, ಅವರಿಗೆ ಅವಕಾಶ ಸಿಗುತ್ತಿಲ್ಲ. ಸೇರಲೇಬೇಕೆಂದು ಪಣತೊಟ್ಟಿರುವ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಚಹಾಲ್ ಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ರಣಜಿ ಟ್ರೋಫಿಯಲ್ಲಿ ಹರಿಯಾಣ ಪರ ಆಡುತ್ತಿರುವ ಚಹಾಲ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಎರಡು ರನ್ ಗಳಿಂದ ಅರ್ಧ ಶತಕ ವಂಚಿತರಾಗಿದ್ದಾರೆ.
ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ಹರಿಯಾಣ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ 453 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಹಿಮಾಂಶು ರಾಣಾ ಹಾಗೂ ಧೀರು ಸಿಂಗ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ನಾಯಕ ಅಂಕಿತ್ ರಾಜೇಶ್ ಕುಮಾರ್ ಹಾಗೂ ಸುಮಿತ್ ಕುಮಾರ್ ಅರ್ಧಶತಕದ ಕಾಣಿಕೆ ನೀಡಿದ್ದಾರೆ. ಸ್ಪಿನ್ನರ್ ಚಹಾಲ್ ಕೂಡ ಉತ್ತಮವಾಗಿ ಆಡಿದ್ದಾರೆ.
10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಯುಜ್ವೇಂದ್ರ ಚಹಾಲ್ ಉತ್ತಮ ಪ್ರದರ್ಶನ ನೀಡಿದರು. ಬರೋಬ್ಬರಿ 152 ಎಸೆತಗಳನ್ನು ಎದುರಿಸಿದ ಚಹಾಲ್ 48 ರನ್ ಗಳ ಇನಿಂಗ್ಸ್ ಕಟ್ಟಿದರು. ಯುಜುವೇಂದ್ರ ಚಹಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ದೊಡ್ಡ ಇನ್ನಿಂಗ್ಸ್ ಇದಾಗಿದೆ. 6 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ.
ಹರಿಯಾಣ ಪರ ಒಟ್ಟು 11 ಓವರ್‌ಗಳನ್ನು ಚಹಾಲ್ ಎಸೆದಿದ್ದು, 57 ರನ್ ನೀಡಿದ್ದಾರೆ. ಆದರೆ ಅವರು ಒಂದೇ ಒಂದು ವಿಕೆಟ್ ಪಡೆದಿಲ್ಲ. ಚಹಾಲ್ ಅವರ 48 ರನ್‌ಗಳ ಕೊಡುಗೆಯೊಂದಿಗೆ ಹರಿಯಾಣ ತಂಡ 453 ರನ್ ಗಳಿಸುವಂತಾಯಿತು. ಹೀಗಾಗಿ ಹರಿಯಾಣ ಭಾರೀ ಮುನ್ನಡೆ ಸಾಧಿಸಿದೆ.