ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಚೆಂಡು ಬದಲಾವಣೆಗೆ ಸಂಬಂಧಿಸಿದಂತೆ ನಡೆದ ಹೈಡ್ರಾಮಾಕ್ಕೆ ಭಾರತದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಭಾರತದಲ್ಲಿ ನಡೆದಿರುತ್ತಿದ್ದರೆ ಬ್ರಿಟಿಷ್ ಮಾಧ್ಯಮಗಳು ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿದ್ದವು ಎಂದು ಗವಾಸ್ಕರ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಇನ್ನಿಂಗ್ಸ್ ವೇಳೆ, ಭಾರತ ತಂಡ 10.4 ಓವರ್ ಬೌಲ್ ಮಾಡಿದ್ದ ಚೆಂಡು ಬಹುಬೇಗ ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು. ಇದರಿಂದ ಭಾರತದ ನಾಯಕ ಶುಭಮನ್ ಗಿಲ್ ಅಂಪೈರ್‌ಗಳಿಗೆ ಚೆಂಡು ಬದಲಾಯಿಸುವಂತೆ ಮನವಿ ಮಾಡಿದರು. ಅಂಪೈರ್‌ಗಳು ಗಿಲ್ ಮನವಿಯನ್ನು ಸ್ವೀಕರಿಸಿ ಚೆಂಡನ್ನು ರಿಂಗ್‌ನಲ್ಲಿ ಪರೀಕ್ಷಿಸಿದರು. ರಿಂಗ್‌ನೊಳಗೆ ಚೆಂಡು ಪ್ರವೇಶಿಸದ ಕಾರಣ, ಅಂಪೈರ್‌ಗಳು ಬೇರೆ ಚೆಂಡನ್ನು ನೀಡಲು ಒಪ್ಪಿಕೊಂಡರು.
ಆದರೆ, ಬದಲಿ ಚೆಂಡು ಕೇವಲ 10 ಓವರ್‌ಗಳಿಗೆ ಬಳಸಿದ ಚೆಂಡಿನಂತೆ ಕಾಣುತ್ತಿರಲಿಲ್ಲ ಎಂದು ಗಿಲ್ ಆಕ್ಷೇಪಿಸಿದರು. ಇದು ಸುಮಾರು 20 ಓವರ್‌ಗಳ ಹಳೆಯ ಚೆಂಡಿನಂತೆ ಕಾಣಿಸುತ್ತಿತ್ತು ಎಂದು ಗಿಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು. ಸಿರಾಜ್ ಸ್ಟಂಪ್ ಮೈಕ್‌ನಲ್ಲಿ “ಇದು 10 ಓವರ್‌ಗಳಿಗೆ ಬಳಸಿರುವ ಚೆಂಡಾ?” ಎಂದು ಪ್ರಶ್ನಿಸಿದ್ದು ಕೇಳಿಸಿತು. ಆದರೆ, ಭಾರತದ ಆಟಗಾರರ ಮನವಿಯನ್ನು ಅಂಪೈರ್‌ಗಳು ತಿರಸ್ಕರಿಸಿದರು.
ಗವಾಸ್ಕರ್ ಆಕ್ರೋಶ
ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಕಾಮೆಂಟರಿ ನೀಡುತ್ತಿದ್ದ ಸುನೀಲ್ ಗವಾಸ್ಕರ್, ಮೈದಾನದಲ್ಲಿ ಅಂಪೈರ್‌ಗಳು ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ನೀವು ಇಲ್ಲಿಂದ ನೋಡಿದರೂ ಅದು 10 ಓವರ್‌ಗಳ ಹಳೆಯ ಚೆಂಡಲ್ಲ ಎಂದು ಹೇಳಬಹುದು, ಅದು 20 ಓವರ್‌ಗಳ ಹಳೆಯ ಚೆಂಡಿನಂತಿದೆ,” ಎಂದು ಗವಾಸ್ಕರ್ ಹೇಳಿದ್ದಾರೆ. “ಇದೇ ಘಟನೆ ಭಾರತದಲ್ಲಿ ನಡೆದಿದ್ದರೆ….” ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಭಾರತದಲ್ಲಿ ಬದಲಾಯಿಸಲಾದ ಚೆಂಡುಗಳಿಗೆ ಹೋಲುವ ಚೆಂಡುಗಳು ಇಲ್ಲದಿದ್ದರೆ, ಬ್ರಿಟಿಷ್ ಮಾಧ್ಯಮವು ಖಂಡಿತವಾಗಿಯೂ ಅದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿತ್ತು ಎಂಬ ಅರ್ಥದಲ್ಲಿ ಗವಾಸ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಗ್ಲೆಂಡ್‌ನ ಇನ್ನಿಂಗ್ಸ್ ಅಂತ್ಯ
ಪಂದ್ಯದ ಎರಡನೇ ದಿನ ಇಂಗ್ಲೆಂಡ್ ತಂಡ ಪ್ರಥಮ ಇನ್ನಿಂಗ್ಸ್‌ನಲ್ಲಿ 112.3 ಓವರ್‌ಗಳಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋ ರೂಟ್ ಶತಕ ಪೂರೈಸಿದರೆ, ಜೇಮಿ ಸ್ಮಿತ್ (51) ಮತ್ತು ಬ್ರೈಡನ್ ಕಾರ್ಸ್ (56) ತಲಾ ಅರ್ಧಶತಕಗಳನ್ನು ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.
ಈ ಚೆಂಡು ಬದಲಾವಣೆ ವಿವಾದವು ಪಂದ್ಯದ ಬಗೆಗಿನ ಚರ್ಚೆಯನ್ನು ಹೆಚ್ಚಿಸಿದ್ದು, ಅಂಪೈರ್‌ಗಳ ನಿರ್ಧಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.



















